ADVERTISEMENT

ಸಂತೋಷ್‌ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಗಾಂಧಿನಗರ ನಾರಾಯಣಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 14:21 IST
Last Updated 13 ಏಪ್ರಿಲ್ 2022, 14:21 IST

ಕೋಲಾರ: ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್‌ ಪಾಟೀಲ ಅವರ ಆತ್ಮಹತ್ಯೆಯು ಗಂಭೀರ ಪ್ರಕರಣವಾಗಿದ್ದು, ಸಚಿವ ಈಶ್ವರಪ್ಪ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಹೊಣೆ ಎಂದು ಸಂತೋಷ್‌ ಪಾಟೀಲ ಅವರ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಮಗಾರಿ ಬಾಕಿ ಬಿಲ್‌ ಪಾವತಿಗೆ ಈಶ್ವರಪ್ಪ ಅವರು ಶೇ 40 ಕಮಿಷನ್‌ ಕೊಡುವಂತೆ ಒತ್ತಡ ಹೇರಿದ್ದ ವಿಚಾರವನ್ನು ಸಂತೋಷ್‌ ಅವರು ಈ ಹಿಂದೆಯೇ ಪ್ರಸ್ತಾಪಿಸಿದ್ದರು ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಪ್ರತಿ ಕಾಮಗಾರಿಯಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಶೇ 40ರಷ್ಢು ಕಮಿಷನ್ ಪಡೆಯುತ್ತಿರುವುದಾಗಿ ಮತ್ತು ಇದರಿಂದ ಕಾಮಗಾರಿ ನಿರ್ವಹಣೆಗೆ ಸಮಸ್ಯೆ ಆಗುತ್ತಿರುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೇ, ಕಮಿಷನ್‌ ದಂಧೆಗೆ ಕಡಿವಾಣ ಹಾಕುವಂತೆ ಸಂಘವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಹಿಂದೆಯೇ ಪತ್ರ ಬರೆದಿತ್ತು ಎಂದು ತಿಳಿಸಿದ್ದಾರೆ.

ADVERTISEMENT

ಪ್ರಧಾನಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಸಚಿವರ ಕಮಿಷನ್‌ ದಂಧೆ ತಡೆಗೆ ಕ್ರಮ ಕೈಗೊಂಡಿದ್ದರೆ ಸಂತೋಷ್‌ ಅವರು ಆತ್ಮಹತ್ಯೆ ಮಾಡಿಕೊಳ್ಳುವದನ್ನು ತಡೆಯಬಹುದಿತ್ತು. ಇದೀಗ ಅವರ ಕುಟುಂಬ ಬೀದಿಗೆ ಬಂದಿದೆ. ಸಂತೋಷ್‌ರ ಆತ್ಮಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಕಮಿಷನ್‌ ದಂಧೆಯಿಂದ ಮತ್ತಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಪ್ರಧಾನಿಗಳು ಕೂಡಲೇ ಮಧ್ಯಪ್ರವೇಶಿಸಿ ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಈಶ್ವರಪ್ಪ ಅವರಿಗೆ ನೈತಿಕತೆಯಿದ್ದರೆ ಸಚಿವ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ಕೊಡಬೇಕು. ಸಂತೋಷ್‌ರ ಆತ್ಮಹತ್ಯೆ ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.