
ಕೋಲಾರ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ಸೋಮವಾರ ನಗರದಲ್ಲಿ ಸರ್ದಾರ್ @ 150 ಏಕತಾ ಪಾದಯಾತ್ರೆ ನಡೆಯಿತು.
ಸಂಸದ ಎಂ.ಮಲ್ಲೇಶ್ ಬಾಬು ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರವಾಸಿ ಮಂದಿರ ಬಳಿ ಆರಂಭವಾಗಿ ಡೂಂ ಲೈಟ್ ವೃತ್ತ, ಕ್ಲಾಕ್ ಟವರ್ ಮೂಲಕ ವಿವಿಧ ರಸ್ತೆಗಳಲ್ಲಿ ಸಾಗಿ ಎಂ.ಜಿ.ರಸ್ತೆಗೆ ಬಂದು ಗಾಂಧಿವನದಲ್ಲಿ ಸಮಾಪ್ತಿಗೊಂಡಿತು.
ಒಂದೇ ಭಾರತ- ಆತ್ಮ ನಿರ್ಭರ ಭಾರತ, ಬೋಲೋ ಭಾರತ್ ಮಾತಾಕೀ ಜೈ, ಏಕ್ ಭಾರತ ಶ್ರೇಷ್ಠ ಭಾರತ, ಯುವಶಕ್ತಿ ದೇಶದ ಶಕ್ತಿ, ಮೇರಾ ಭಾರತ ಶ್ರೇಷ್ಠ ಭಾರತ ಎಂದು ಘೋಷಣೆ ಮೊಳಗಿಸುತ್ತಾ ಸಾಗಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೂ ಜೈಕಾರ ಹಾಕಿದರು. ಗಾಂಧಿವನದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಇದಕ್ಕೂ ಮೊದಲು ನಗರದ ಪ್ರವಾಸಿ ಮಂದಿರದ ಮುಂದೆ ಪಾದಯಾತ್ರೆಗೆ ಮಲ್ಲೇಶ್ ಬಾಬು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಎಂಟು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಭಾರತದ ಶಕ್ತಿ ಯುವಶಕ್ತಿ. ನಮ್ಮ ದೇಶದ ಯುವಶಕ್ತಿ ಹಾಗೂ ಏಕತೆ ತೋರಿಸಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ಸಾಮಾಜಿಕ ಹೊಣೆಗಾರಿಕೆ ಇದೆ. ಸತ್ಯಕ್ಕಾಗಿ ದನಿ ಎತ್ತಬೇಕು’ ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದ ಸಾರ್ವಭೌಮ ಹಾಗೂ ಏಕ ಭಾರತ ನಿರ್ಮಾಣಕ್ಕೆ ಶ್ರಮಿಸಿದರು. ಈಗ ನಾವು ವಿಶ್ವದಲ್ಲೇ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. 2047ರೊಳಗೆ ಮೊದಲ ಸ್ಥಾನಕ್ಕೆ ಏರಬೇಕು. ಇದು ಕೇವಲ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದ ಸಾಧ್ಯವಿಲ್ಲ. ಯುವ ಜನತೆಯಿಂದ ಸಾಧ್ಯ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಇದು ದೇಶದ ಏಕತೆ, ಸೌಹಾರ್ದಕ್ಕಾಗಿ ದುಡಿದು ಮಡಿದವರ ಸ್ಮರಣೆ ಕಾರ್ಯಕ್ರಮ ಕೂಡ. ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಭಾರತೀಯರು ಏಕತೆ, ಸಹಬಾಳ್ವೆಯಿಂದ ಬದುಕಬೇಕೆಂದು ಕರೆಕೊಟ್ಟಿದ್ದರು. ಅವರ ಉದ್ದೇಶ ಈಡೇರಿಸುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು.
ನವಭಾರತ ನಿರ್ಮಾಣಕ್ಕೆ ಶ್ರಮಿಸಿ ಭಾರತವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಪಣ ತೊಡಬೇಕು, ಉತ್ತುಂಗಕ್ಕೆ ಏರಿಸಬೇಕು. ದೇಹದ ಕಣಕಣದಲ್ಲಿ ಭಾರತೀಯತೆ, ಅಖಂಡತೆ, ಏಕತೆ ಇರುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ರಾಷ್ಟ್ರೀಯ ಏಕತೆಯ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ಈ ಪಾದಯಾತ್ರೆ ನಡೆಸಲಾಗಿದೆ. ಒಂದು ಭಾರತ ಶ್ರೇಷ್ಠ ಭಾರತ ಎಂಬುದು ಇದರ ಉದ್ದೇಶ. ಒಡೆದು ಹೋಗಿದ್ದ ದೇಶವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿ. ಅವರು ಕಂಡಿದ್ದ ಕನಸು, ಗುರಿಯನ್ನು ಯುವಜನತೆ ಈಡೇರಿಸಬೇಕಿದೆ’ ಎಂದರು.
ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಕುಲಸಚಿವ ಡಾ.ಮುನಿನಾರಾಯಣ ಮಾತನಾಡಿ, ‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಯುವಜನತೆ ಒಗ್ಗಟ್ಟಿನ ಮೂಲಕ ಏಕತೆ ಪ್ರದರ್ಶಿಸಬೇಕು’ ಎಂದು ಹೇಳಿದರು.
ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಟೀ ಶರ್ಟ್, ಕ್ಯಾಪ್, ಓಆರ್‌ಎಸ್ ಹಾಗೂ ಲಘು ಉಪಾಹಾರ ವಿತರಿಸಲಾಯಿತು. ಮಂಜುಳಾ ಕೊಂಡರಾಜನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ, ತಹಶೀಲ್ದಾರ್ ಕಚೇರಿಯ ಹನ್ಸಾ ಮರಿಯಾ, ಮೈ ಭರತ್ ಜಿಲ್ಲಾ ಯುವಜನ ಅಧಿಕಾರಿ ರಾಜೇಶ್ ಕಾರಂತ್, ಪ್ರವೀಣ್ ಕುಮಾರ್, ಮುಖಂಡರಾದ ಬಿ.ವಿ ಮಹೇಶ್, ವಿಶ್ವನಾಥ್, ಮಾಗೇರಿ ನಾರಾಯಣಸ್ವಾಮಿ, ಪುರ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ರಾಜೇಶ್ ಸಿಂಗ್, ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಶ್ರೀಧರ್, ಸುಮನ್, ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.