ADVERTISEMENT

ಮುಳಬಾಗಿಲು: ಕಾಲೇಜು ಉದ್ಘಾಟನೆ ಕೂಡಿಬಾರದ ಕಾಲ

ಎಸ್‌.ಸಿ, ಎಸ್.ಟಿ ವಸತಿ ಪದವಿ ಕಾಲೇಜು ಲೋಕಾರ್ಪಣೆಗೆ ಗ್ರಹಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 4:23 IST
Last Updated 23 ಜನವರಿ 2023, 4:23 IST
ಮುಳಬಾಗಿಲು ದೇವರಾಯ ಸಮುದ್ರದ ಬಳಿ ನೂತನವಾಗಿ ನಿರ್ಮಾಣ ಆಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಸತಿಯುಕ್ತ ಕಾಲೇಜು ಕಟ್ಟಡದ ಹೊರ ನೋಟ
ಮುಳಬಾಗಿಲು ದೇವರಾಯ ಸಮುದ್ರದ ಬಳಿ ನೂತನವಾಗಿ ನಿರ್ಮಾಣ ಆಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಸತಿಯುಕ್ತ ಕಾಲೇಜು ಕಟ್ಟಡದ ಹೊರ ನೋಟ   

ನಂಗಲಿ( ಮುಳಬಾಗಿಲು): ಪರಿಶಿಷ್ಟ ಜಾತಿ ಮತ್ತು ಪಂಗಡದ ವಸತಿಯುಕ್ತ ಪದವಿ ಕಾಲೇಜಿನ ಕಟ್ಟಡ
ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದಿದೆ. ಆದರೂ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಇದರಿಂದ ಕಾಲೇಜು ಕಾರ್ಯಾರಂಭಕ್ಕೆ ಗ್ರಹಣ ಹಿಡಿದಿದೆ.

ಇದರಿಂದ ಇಲ್ಲಿ ಎರಡು ವರ್ಷದಲ್ಲಿ ಪ್ರವೇಶ ಪಡೆದಿದ್ದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ದಾಖಲಾಗಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರದ ಸಮೀಪ ಮತ್ತು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ವಸತಿಯುಕ್ತ ಕಾಲೇಜನ್ನು ಸುಮಾರು ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಾಲೇಜು ಕಟ್ಟಡ ಸುಸಜ್ಜಿತ
ಹಾಗೂ ಆಕರ್ಷಿಣೀಯವಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಆದರೆ ಇಲ್ಲಿ ವಿದ್ಯಾರ್ಥಿಗಳು
ವ್ಯಾಸಂಗ ಮಾಡಲು ಇನ್ನೂ ಕಾಲ ಕೂಡಿ ಬಂದಿಲ್ಲ. ವಸತಿ ನಿಲಯದಲ್ಲಿ ಕೆಲ ಮೂಲ ಸೌಕರ್ಯ ಹಾಗೂ ಊಟದ ವ್ಯವಸ್ಥೆ ಆಗದ ಕಾರಣ ಉದ್ಘಾಟನೆ
ತಡವಾಗುತ್ತಿದೆ.

ADVERTISEMENT

ಇದರಿಂದಾಗಿ ಇಲ್ಲಿ ಪ್ರವೇಶ ಪಡೆದಿದ್ದ 317 ವಿದ್ಯಾರ್ಥಿಗಳು ನಗರದ ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷವು ಕೂಡ ಇದೇ ರೀತಿ ನೂರು ಮಕ್ಕಳು ಪ್ರವೇಶಾತಿ
ಪಡೆದಿದ್ದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಧ್ಯಾರ್ಥಿಗಳಿಗೆ ಶೇ 65, ಉಳಿದ ವಿದ್ಯಾರ್ಥಿಗಳಿಗೆ ಶೇ 35 ವಿದ್ಯಾರ್ಥಿಗಳ ದಾಖಲಾತಿಗೆ ಅನುಕೂಲವಾಗುವಂತೆ ಪ್ರವೇಶಾತಿ ನಿಗದಿ
ಪಡಿಸಲಾಗಿದೆ. ಇದರಿಂದ ದಲಿತರು, ಹಿಂದುಳಿದವರು ಹಾಗೂ ಬಡ ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗುತ್ತಿದ್ದಾರೆ.

ರಾಜ್ಯದ ಗಡಿಭಾಗ ಹಾಗೂ ಮಿಸಲು ಕ್ಷೇತ್ರವಾದ ಮುಳಬಾಗಿಲು ತಾಲ್ಲೂಕಿನಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಇದ್ದಾರೆ. ಹೀಗಾಗಿ ಈ ಕೂಡಲೇ ಅಗತ್ಯ ಸೌಲಭ್ಯ ಕಲ್ಪಿಸಿ, ಕಾಲೇಜು ಆರಂಭಿಸಬೇಕು ಎನ್ನುವುದು ಸ್ಥಳೀಯರ
ಆಗ್ರಹ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿರುವ ಕಾಲೇಜು ಅದಷ್ಟು ಬೇಗ ವಿದ್ಯಾರ್ಥಿಗಳಿಗೆ ಮುಕ್ತವಾಗಲಿ. ಇಲ್ಲದಿದ್ದರೆ ಮುಂದೊಂದು ದಿನ ಅನೈತಿಕ ಚಟುವಟಿಕೆ ತಾಣ ಆಗಬಹುದು ಎಂದು ಸ್ಥಳೀಯ ನಿವಾಸಿ ಶಿವಪ್ಪ ಆತಂಕ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.