ADVERTISEMENT

ಪೌರ ಕಾರ್ಮಿಕರು 3ನೇ ದರ್ಜೆ ಪ್ರಜೆಗಳಲ್ಲ

ಸೇವೆಗೆ ಬೆಲೆ ಕಟ್ಟಲಾಗದು: ಜಿಲ್ಲಾಧಿಕಾರಿ ಸತ್ಯಭಾಮ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 13:34 IST
Last Updated 22 ಸೆಪ್ಟೆಂಬರ್ 2020, 13:34 IST
ಕೋಲಾರದಲ್ಲಿ ಮಂಗಳವಾರ ನಡೆದ ಕ್ರೀಡಾಕೂಟದಲ್ಲಿ ಪೌರ ಕಾರ್ಮಿಕರು ಪಾಲ್ಗೊಂಡರು.
ಕೋಲಾರದಲ್ಲಿ ಮಂಗಳವಾರ ನಡೆದ ಕ್ರೀಡಾಕೂಟದಲ್ಲಿ ಪೌರ ಕಾರ್ಮಿಕರು ಪಾಲ್ಗೊಂಡರು.   

ಕೋಲಾರ: ‘ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಪೌರ ಕಾರ್ಮಿಕರನ್ನು ಸಮಾಜ ಮೂರನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಆಯೋಜನೆಯಾಗಿದ್ದ ಪೌರ ಕಾರ್ಮಿಕರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಎಲ್ಲೆಡೆ ಕೋವಿಡ್‌–19 ಆತಂಕ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲೂ ಪೌರ ಕಾರ್ಮಿಕರು ಜೀವದ ಹಂಗು ತೊರೆದು ಹಗಲಿರುಳು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ’ ಎಂದು ಸ್ಮರಿಸಿದರು.

‘ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಪೌರ ಕಾರ್ಮಿಕರು ಕೆಲಸದ ಜತೆಗೆ ಆರೋಗ್ಯದ ಕಡೆ ಗಮನ ಹರಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡಿಸಿ ಸುಶಿಕ್ಷಿತರಾಗಿ ಮಾಡುವ ಮೂಲಕ ಭವಿಷ್ಯ ಉಜ್ವಲಗೊಳಿಸಬೇಕು’ ಎಂದು ಆಶಿಸಿದರು.

ADVERTISEMENT

‘ಕೋಲಾರ ಕಸದ ಊರೆಂಬ ಅಭಿಪ್ರಾಯವಿದೆ. ಈ ಪರಿಸ್ಥಿತಿ ಬದಲಾಗಬೇಕು. ಇಡೀ ನಗರ ಸ್ವಚ್ಛವಾಗಿ ಇರಬೇಕು. ಸ್ವಚ್ಛತೆಗೆ ಉಡುಪಿ ಹಾಗೂ ಪೌರ ಕಾರ್ಮಿಕರ ಜೀವನ ಶೈಲಿಗೆ ಸಿಂಗಪುರ ಮಾದರಿ ಆಗಬೇಕು. ಆಗಾಗ್ಗೆ ನಗರ ಪ್ರದಕ್ಷಿಣೆ ಮಾಡುತ್ತೇನೆ. ಕಸ ಕಂಡುಬಂದರೆ ಆ ಭಾಗದ ನೋಡಲ್‌ ಅಧಿಕಾರಿ, ಮೇಸ್ತ್ರಿಗಳು ಮತ್ತು ಪೌರ ಕಾರ್ಮಿಕರನ್ನು ಹೊಣೆಯಾಗಿಸಿ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಬದ್ಧತೆ ಏಕಿಲ್ಲ: ‘ಉಡುಪಿಯಲ್ಲಿ ಪೌರ ಕಾರ್ಮಿಕರು ಬೆಳಗಿನ ಜಾವ 3 ಗಂಟೆಗೆ ರಸ್ತೆ ಸ್ವಚ್ಛಗೊಳಿಸುವುದನ್ನು ನೋಡಿದ್ದೇನೆ. ಆ ಬದ್ಧತೆ ಕೋಲಾರದ ಪೌರ ಕಾರ್ಮಿಕರಿಗೆ ಏಕಿಲ್ಲ. ನಗರದ ಪೌರ ಕಾರ್ಮಿಕರೊಬ್ಬರು ಬರಿಗಾಲಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿದ್ದ ಫೋಟೊ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಬಂದಿತ್ತು. ಶೂ, ಗ್ಲೌಸ್ ಕೊಡದೆ ಪೌರ ಕಾರ್ಮಿಕರನ್ನು ಸ್ವಚ್ಛತಾ ಕೆಲಸದಲ್ಲಿ ತೊಡಗಿಸುವುದು ಸರಿಯಲ್ಲ’ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ಸಿಂಗಪುರದಲ್ಲಿ ಪೌರ ಕಾರ್ಮಿಕರು ಅಧಿಕಾರಿಗಳಂತೆ ಇರುತ್ತಾರೆ. ಪೌರ ಕಾರ್ಮಿಕರನ್ನು ಅಧ್ಯಯನ ಪ್ರವಾಸಕ್ಕಾಗಿ ಸಿಂಗಪುರಕ್ಕೆ ಕಳುಹಿಸಲಾಗುತ್ತದೆ. ಸಿಂಗಪುರ ನೋಡಿ ಸ್ವಚ್ಛತೆ ಕಲಿಯಬೇಕು. ಪೌರ ಕಾರ್ಮಿಕರಿಗೆ ಸಂಬಂಧಿಸಿದ ಕಡತ ಬಂದರೆ ಒಂದು ಕ್ಷಣ ತಡ ಮಾಡದೆ ಪರಿಶೀಲಿಸಿ ವಿಲೇವಾರಿ ಮಾಡುತ್ತೇನೆ. ಅದೇ ರೀತಿ ಪೌರ ಕಾರ್ಮಿಕರು ಸ್ವಚ್ಛತೆ ವಿಚಾರದಲ್ಲಿ ಮಾದರಿ ನಗರವಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

ಸುರಕ್ಷತಾ ಸಲಕರಣೆ: ‘ಪೌರ ಕಾರ್ಮಿಕರು ದೈನಂದಿನ ಕೆಲಸ ಮುಗಿಸಿ ಮನೆಗೆ ಹೋದ ನಂತರ ಸ್ನಾನ ಮಾಡಬೇಕು. ಕೆಲಸದ ವೇಳೆ ಕಡ್ಡಾಯವಾಗಿ ಸುರಕ್ಷತಾ ಸಲಕರಣೆ ಬಳಸಬೇಕು. ಮೇಸ್ತ್ರಿಗಳು ಈ ಬಗ್ಗೆ ಗಮನ ಹರಿಸಬೇಕು, ಮೇಸ್ತ್ರಿಗಳ ಹೆಂಡತಿ ಮಕ್ಕಳು ಆರೋಗ್ಯವಾಗಿದ್ದರೆ ಸಾಕೆ? ಪೌರ ಕಾರ್ಮಿಕರ ಆರೋಗ್ಯ ಮುಖ್ಯವಲ್ಲವೇ?’ ಎಂದು ಪ್ರಶ್ನಿಸಿದರು.

‘ನಗರದಲ್ಲಿ ಕಸ ರಾಶಿಗಳಿರುವ ಸ್ಥಳ ಗುರುತಿಸಿ. ಅಲ್ಲಿ ಕಸ ಸುರಿಯುವವರ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ. ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿಯುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಶಿಫಾರಸು ಮಾಡಿ. ಹೋಟೆಲ್‌ನವರು ಹಣ ಕೊಡುತ್ತಾರೆ ಎಂಬ ಕಾರಣಕ್ಕೆ ವಿಂಗಡಣೆ ಮಾಡದ ಕಸ ತೆಗೆದುಕೊಳ್ಳುವುದು ಸರಿಯಲ್ಲ’ ಎಂದು ಗುಡುಗಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ನಗರಸಭೆ ಪರಿಸರ ವಿಭಾಗದ ಎಂಜಿನಿಯರ್‌ ಪುನೀತ್, ಕಂದಾಯ ಅಧಿಕಾರಿ ಚಂದ್ರು, ಕಂದಾಯ ನಿರೀಕ್ಷಕ ತ್ಯಾಗರಾಜ್, ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರ ಸಂಘದ ಸದಸ್ಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.