ಮಾಲೂರು: ತಾಲ್ಲೂಕಿನ ಟೇಕಲ್ ಹೋಬಳಿಯ ಅಗಲುಕೋಟೆ ಗ್ರಾಮದ ಸರ್ಕಾರಿ ಶಾಲೆಗೆ ಮೀಸಲಿಟ್ಟಿದ್ದ 50 ಎಕರೆ 26 ಗುಂಟೆ ಜಮೀನು ಪರಭಾರೆಯಾಗಿದ್ದು, ಶಾಲೆಗೆ ಸೇರಿದ ಜಮೀನನ್ನು ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳಬೇಕೆಂದು ಒತ್ತಾಯಿಸಿ ಮಾಜಿ ಶಾಸಕ ಕೆ.ಎಸ್.ಮಂಜುನಾಥ ಗೌಡ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ರೀನಿವಾಸಲು ಎಂಬುವವರು 300 ಎಕರೆ ಭೂಮಿಯನ್ನು ಹೊಂದಿದ್ದರು. ಅದರಲ್ಲಿ 1955ರಲ್ಲಿ ದಾನಪತ್ರದ ಮೂಲಕ 50 ಎಕರೆ 26 ಗುಂಟೆ ಜಮೀನನ್ನು ಸರ್ಕಾರಿ ಶಾಲೆಗೆ ನೋಂದಣಿ ಮಾಡಿಕೊಟ್ಟಿದ್ದರು. ನಂತರ ಶ್ರೀನಿವಾಸಲು ಅವರ ಮಕ್ಕಳು ಮೂಲ ದಾಖಲೆ ಬಚ್ಚಿಟ್ಟು, ಮೂನ್ನೂರು ಎಕರೆ ಭೂಮಿಯನ್ನು ಪೌತಿವಾರು ಭಾಗ ಮಾಡಿಕೊಂಡು ಕೃಷ್ಣಪ್ಪ ಎಂಬುವರಿಗೆ ಮಾರಾಟ ಮಾಡಿದ್ದರು. ಇತ್ತೀಚೆಗೆ ಕೃಷ್ಣಪ್ಪ ಅವರು ಖಾಸಗಿ ಕಂಪನಿಯೊಂದಕ್ಕೆ 300 ಎಕರೆ ಜಮೀನು ಮಾರಾಟ ಮಾಡಿದ್ದರು. ಕಂಪನಿಯವರು ಜಮೀನಿಗೆ ಕಾಂಪೌಂಡ್ ಹಾಕಲು ಮುಂದಾದಾಗ ಗ್ರಾಮಸ್ಥರು ಅಡ್ಡಿಪಡಿಸಿದ್ದರು. ಆದರೆ, ಕಂಪನಿಯವರು ರೌಡಿಗಳನ್ನು ಕರೆತಂದು ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದಾಗ ಗ್ರಾಮಸ್ಥರು ನಮ್ಮ ಬಳಿ ಬಂದಿದ್ದಾರೆ. ಹಾಗಾಗಿ ಸರ್ಕಾರಿ ವಿದ್ಯಾಸಂಸ್ಥೆಗೆ ಗ್ರಾಮದ ಹಿರಿಯರು ದಾನ ನೀಡಿರುವ ಭೂಮಿಯನ್ನು ಶಿಕ್ಷಣ ಇಲಾಖೆಗೆ ವಾಪಸ್ ನೀಡಬೇಕೆಂದು’ ಕಂಪನಿಯವರನ್ನು ಒತ್ತಾಯಿಸಿದರು.
ಜಮೀನಿಗೆ ಸೇರಿದ ಎಲ್ಲಾ ಮೂಲ ದಾಖಲೆಗಳನ್ನು ಪ್ರದರ್ಶಿಸಿ, ಶಿಕ್ಷಣ ಇಲಾಖೆಗೆ ಜಮೀನು ಉಳಿಸಿಕೊಳ್ಳಲು ಹಲವು ಬಾರಿ ಪತ್ರ ವ್ಯವಹಾರ ಮಾಡಿರುವ ದಾಖಲೆಗಳನ್ನು ಸಹ ಪ್ರದರ್ಶಿಸಿದರು.
ಈ ಕಾರ್ಯದಲ್ಲಿ ಸ್ಥಳೀಯ ಶಾಸಕ ಕೆ.ವೈ.ನಂಜೇಗೌಡರ ಸಹಕಾರವಿದ್ದರೆ ಸರ್ಕಾರಿ ಶಾಲೆಯ ಜಮೀನನ್ನು ಉಳಿಸಿ ಶಿಕ್ಷಣ ಇಲಾಖೆಗೆ ಸೇರುವಂತೆ ಮಾಡಬಹುದು ಎಂದರು.
ಜಿಲ್ಲಾ ಕಾರ್ಯದರ್ಶೀ ಪದ್ಮಾವತಿ, ನಗರ ಯುವ ಮೋರ್ಚಾ ಅಧ್ಯಕ್ಷ ಕಿರಣ್ ರಾವ್, ಟಿ.ಬಿ.ಕೃಷ್ಣಪ್ಪ, ಸೋಮಣ್ಣ, ವೇಣುಗೋಪಾಲ್, ನಾಗರಾಜ್, ಎಸ್.ವಿ.ಲೋಕೇಶ್, ಚಂದ್ರಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.