ADVERTISEMENT

ಭದ್ರತಾ ಕೊಠಡಿ ಕ್ಯಾಮೆರಾ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 7:33 IST
Last Updated 21 ಏಪ್ರಿಲ್ 2019, 7:33 IST
ವಿದ್ಯುನ್ಮಾನ ಮತಯಂತ್ರ ಇರಿಸಿರುವ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭದ್ರತಾ ಕೊಠಡಿಯ ಸಿ.ಸಿ ಕ್ಯಾಮೆರಾಗಳ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಜತೆ ಸ್ಟ್ರಾಂಗ್ ರೂಂಗೆ ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯುನ್ಮಾನ ಮತಯಂತ್ರ ಇರಿಸಿರುವ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭದ್ರತಾ ಕೊಠಡಿಯ ಸಿ.ಸಿ ಕ್ಯಾಮೆರಾಗಳ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಜತೆ ಸ್ಟ್ರಾಂಗ್ ರೂಂಗೆ ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಕೋಲಾರ: ವಿದ್ಯುನ್ಮಾನ ಮತಯಂತ್ರ (ಇವಿಎಂ) ಇರಿಸಿರುವ ಭದ್ರತಾ ಕೊಠಡಿಗೆ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭ್ಯರ್ಥಿ ಸಮ್ಮುಖದಲ್ಲಿ ಶನಿವಾರ ರಾತ್ರಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಇವಿಎಂಗಳಿರುವ ಸ್ಟ್ರಾಂಗ್‌ ರೂಂಗೆ ಕಲ್ಪಿಸಿರುವ ಪೊಲೀಸ್‌ ಭದ್ರತೆ ಹಾಗೂ ಸಿ.ಸಿ ಕ್ಯಾಮೆರಾಗಳ ಕಾರ್ಯ ನಿರ್ವಹಣೆ ಬಗ್ಗೆ ಯಾವುದೇ ಅನುಮಾನವಿಲ್ಲ. ಮಳೆಯ ಕಾರಣಕ್ಕೆ ಕ್ಯಾಮೆರಾಗಳಲ್ಲಿ ತಾಂತ್ರಿಕ ದೋಷ ಉಂಟಾಗಿರಬಹುದು. ಭದ್ರತಾ ಕೊಠಡಿ ಸಿಬ್ಬಂದಿಯು ಈ ತಾಂತ್ರಿಕ ಸಮಸ್ಯೆ ಪರಿಶೀಲಿಸಿ ಸರಿಪಡಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಇವಿಎಂ ಇರಿಸಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುತ್ತಲೂ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಸೆರೆ ಹಿಡಿಯುವ ದೃಶ್ಯಾವಳಿಯನ್ನು 2 ಕಡೆ ದಾಖಲು ಮಾಡಲಾಗುತ್ತಿದೆ. ಹೀಗಾಗಿ ಕ್ಯಾಮೆರಾಗಳ ಕಾರ್ಯವೈಖರಿ ಯಾವುದೇ ಅನುಮಾನ ಬೇಡ’ ಎಂದು ತಿಳಿಸಿದರು.

ADVERTISEMENT

ಕಾರ್ಯಕರ್ತರು ತಿಳಿಸಿದರು: ‘ಭದ್ರತಾ ಕೊಠಡಿಗೆ ಅಳವಡಿಸಿರುವ ಸಿ.ಸಿ ಕ್ಯಾಮೆರಗಳ ಪೈಕಿ 30ಕ್ಕೂ ಹೆಚ್ಚು ಕೆಲಸ ಮಾಡುತ್ತಿಲ್ಲ. ಪಕ್ಷದ ಕಾರ್ಯಕರ್ತರು ಈ ಸಂಗತಿ ಗಮನಿಸಿ ನನಗೆ ಕರೆ ಮಾಡಿ ತಿಳಿಸಿದರು. ಹೀಗಾಗಿ ಜಿಲ್ಲಾಧಿಕಾರಿಗೆ ದೂರು ನೀಡಿದೆ’ ಎಂದು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಹೇಳಿದರು.

‘ಮತ ಏಣಿಕೆ ದಿನದವರೆಗೆ ಸ್ಟ್ರಾಂಗ್‌ ರೂಂನ ಭದ್ರತೆ ಕುರಿತು ಪ್ರತಿನಿತ್ಯ ಮಾಹಿತಿ ನೀಡಲು ರಾತ್ರಿ ಮತ್ತು ಹಗಲು ಸಮಯದಲ್ಲಿ ಇಬ್ಬರು ಕಾರ್ಯಕರ್ತರನ್ನು ನಿಯೋಜಿಸಿ’ ಎಂದು ಪಕ್ಷದ ಮುಖಂಡರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.