ADVERTISEMENT

ಆತ್ಮ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 13:54 IST
Last Updated 23 ಮಾರ್ಚ್ 2019, 13:54 IST
ಕೋಲಾರದಲ್ಲಿ ಶನಿವಾರ ನಡೆದ ಆತ್ಮ ಯೋಜನೆ ಸಮಿತಿ ಸಭೆಯಲ್ಲಿ ಜಿ.ಪಂ ಸಿಇಒ ಜಿ.ಜಗದೀಶ್ ಮಾತನಾಡಿದರು.
ಕೋಲಾರದಲ್ಲಿ ಶನಿವಾರ ನಡೆದ ಆತ್ಮ ಯೋಜನೆ ಸಮಿತಿ ಸಭೆಯಲ್ಲಿ ಜಿ.ಪಂ ಸಿಇಒ ಜಿ.ಜಗದೀಶ್ ಮಾತನಾಡಿದರು.   

ಕೋಲಾರ: ‘ಕೇಂದ್ರ ಸರ್ಕಾರದ ಆತ್ಮ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ಆತ್ಮ ಯೋಜನೆ ಸಮಿತಿ ಸಭೆಯಲ್ಲಿ ಮಾತನಾಡಿ, ‘ರೈತರಿಗೆ ನೂತನ ಕೃಷಿ ತಂತ್ರಜ್ಞಾನ ಕುರಿತು ಅರಿವು ಮೂಡಿಸಲು ಹಾಗೂ ಕೃಷಿ ಅಭಿವೃದ್ಧಿಗೆ ಪೂರಕವಾಗಿ ತರಬೇತಿ ಕಾರ್ಯಾಗಾರ ನಡೆಸಬೇಕು’ ಎಂದು ಹೇಳಿದರು.

‘ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಇಳುವರಿ ತೆಗೆಯುವ ನಿಟ್ಟಿನಲ್ಲಿ ರೈತರಿಗೆ ವಿವಿಧ ರೀತಿಯ ತರಬೇತಿ ನೀಡಲು ಕೇಂದ್ರ ಸರ್ಕಾರವೇ ಸೂಚಿಸಿದೆ. ಇದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಅಧಿಕಾರಿಗಳದು. ಗ್ರಾಮಗಳಿಗೆ ತೆರಳಿ ರೈತರನ್ನು ಸಂಪರ್ಕಿಸಿ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಜತೆಗೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಕೊಳವೆ ಬಾವಿಗಳಲ್ಲಿ ಅಂತರ್ಜಲ ಬತ್ತಿದೆ. ನೀರಿನ ಸಮಸ್ಯೆಯ ಕಾರಣಕ್ಕೆ ರೈತರು ತೋಟಗಾರಿಕೆ, ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದಾರೆ. ನೀರು ಲಭ್ಯವಿರುವ ರೈತರು ಮಾಹಿತಿ ಕೊರತೆಯಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರಿಗೆ ಕೃಷಿ ಕುರಿತು ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

₹ 1.94 ಕೋಟಿ ಅನುದಾನ: ‘ಯೋಜನೆಗೆ ₹ 1.94 ಕೋಟಿ ಅನುದಾನ ಮೀಸಲಿಟ್ಟಿದ್ದು, ಕೇಂದ್ರದಿಂದ ಶೇ 60ರಷ್ಟು ಹಾಗೂ ರಾಜ್ಯ ಸರ್ಕಾರದಿಂದ ಶೇ 40ರಷ್ಟು ಹಣ ಬರಲಿದೆ. ಈ ಪೈಕಿ ಈವರೆಗೆ ₹ 1.56 ಕೋಟಿ ಬಿಡುಗಡೆಯಾಗಿದ್ದು, ₹ 80 ಲಕ್ಷ ವೆಚ್ಚವಾಗಿದೆ’ ಎಂದು ಆತ್ಮ ಯೋಜನೆ ಉಪ ನಿರ್ದೇಶಕ ಎ.ಎಸ್.ವೆಂಕಟೇಶ್ ಮಾಹಿತಿ ನೀಡಿದರು.

‘ಯೋಜನೆಯಡಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸಲು ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸಿಬ್ಬಂದಿ ಇರುತ್ತಾರೆ. ಇವರು ನೇರವಾಗಿ ರೈತರನ್ನು ಸಂಪರ್ಕಿಸಿ ಚರ್ಚೆ ನಡೆಸುತ್ತಾರೆ. ಕೃಷಿ ಅಭಿವೃದ್ಧಿಗೆ ಪೂರಕವಾದ ತರಬೇತಿ, ಗುಂಪು ರಚನೆ, ಬೀಜ ಧನ ಹೀಗೆ ಅನೇಕ ಕಾರ್ಯಕ್ರಮ ನಡೆಸಲಾಗುವುದು. ಪ್ರತಿ ಗ್ರಾಮದಲ್ಲೂ ರೈತರ ಗುಂಪು ರಚಿಸಿ ಸೌರ್ಕಯ ಕಲ್ಪಿಸಲಾಗುವುದು’ ಎಂದರು.

ಜಿ.ಪಂ ಯೋಜನಾ ನಿರ್ದೇಶಕ ರವಿಚಂದ್ರನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.