ADVERTISEMENT

ಸಂಸದ– ಸಿಇಒ ನಡುವೆ ಕಾವೇರಿದ ಚರ್ಚೆ

ನೀರಿನ ವಿಚಾರದಲ್ಲಿ ತಾರತಮ್ಯ ಬೇಡ: ಸಂಸದ ಮುನಿಸ್ವಾಮಿ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 13:35 IST
Last Updated 24 ಏಪ್ರಿಲ್ 2020, 13:35 IST
ನೀರಿನ ಸಮಸ್ಯೆ ಸಂಬಂಧ ಕೋಲಾರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮತ್ತು ಜಿ.ಪಂ ಸಿಇಒ ಎಚ್‌.ವಿ.ದರ್ಶನ್‌ ನಡುವೆ ಕಾವೇರಿದ ಚರ್ಚೆಯಾಯಿತು.
ನೀರಿನ ಸಮಸ್ಯೆ ಸಂಬಂಧ ಕೋಲಾರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮತ್ತು ಜಿ.ಪಂ ಸಿಇಒ ಎಚ್‌.ವಿ.ದರ್ಶನ್‌ ನಡುವೆ ಕಾವೇರಿದ ಚರ್ಚೆಯಾಯಿತು.   

ಕೋಲಾರ: ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್‌ ಅವರ ನಡುವೆ ಇಲ್ಲಿ ಶುಕ್ರವಾರ ಕಾವೇರಿದ ಚರ್ಚೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್‌ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು, ‘ಕೆಜಿಎಫ್‌ ತಾಲ್ಲೂಕಿನಲ್ಲಿ ಹೊಸದಾಗಿ 36 ಕೊಳವೆ ಬಾವಿ ಕೊರೆಸಲು ಅನುಮೋದನೆ ನೀಡಲಾಗಿದೆ’ ಎಂದು ವಿವರಿಸಿದರು.

ಇದಕ್ಕೆ ಸಿಡಿಮಿಡಿಗೊಂಡ ಸಂಸದರು, ‘ಕೆಜಿಎಫ್‌ ತಾಲ್ಲೂಕಿನಲ್ಲಿ ಮಾತ್ರ ನೀರಿನ ಸಮಸ್ಯೆಯಿಲ್ಲ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಕೆಜಿಎಫ್‌ನ ಜತೆಗೆ ಉಳಿದ ತಾಲ್ಲೂಕುಗಳಲ್ಲೂ ಕೊಳವೆ ಬಾವಿ ಕೊರೆಸಲು ಯಾಕೆ ಅನುಮೋದನೆ ನೀಡಿಲ್ಲ. ನೀರಿನ ವಿಚಾರದಲ್ಲಿ ಯಾಕೆ ತಾರತಮ್ಯ ಮಾಡುತ್ತಿದ್ದೀರಿ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ADVERTISEMENT

ಆಗ ಅಧಿಕಾರಿಗಳನ್ನು ಸಮರ್ಥಿಸಿಕೊಂಡು ಮಾತಿಗಿಳಿದ ಸಿಇಒ ದರ್ಶನ್‌, ‘ನಾವು ಎಲ್ಲಿ ತಾರತಮ್ಯ ಮಾಡಿದ್ದೇವೆ ತೋರಿಸಿ. ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಗೂ ಹೋಗಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕೆಂದು ನನಗೆ ಗೊತ್ತಿದೆ’ ಎಂದು ಹೇಳಿದರು.

ಇದರಿಂದ ಮತ್ತಷ್ಟು ಕೆರಳಿದ ಸಂಸದರು, ‘ರೀ ದರ್ಶನ್‌, ಬೇಜವಾಬ್ದಾರಿ ಅಧಿಕಾರಿಗಳಿಗೆ ಶಹಬ್ಬಾಸ್‌ಗಿರಿ ಕೊಡುವುದನ್ನು ಬಿಡಿ. ಕೆಜಿಎಫ್‌ನಂತೆ ಇತರೆ ತಾಲ್ಲೂಕುಗಳಿಗೆ ಹೊಸ ಕೊಳವೆ ಬಾವಿಗಳ ಅಗತ್ಯವಿರುವ ಬಗ್ಗೆ ಯಾಕೆ ವರದಿ ತರಿಸಿಕೊಂಡಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗಾಗಿ ಜಿ.ಪಂಗೆ ಬಂದಿದ್ದ ಅನುದಾನ ಯಾಕೆ ವಾಪಸ್‌ ಹೋಯಿತು? ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ’ ಎಂದು ಗುಡುಗಿದರು.

ಉತ್ತರ ಕೊಡಲಾಗುತ್ತಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅವರು ಸಿಇಒ ಮತ್ತು ಸಂಸದರನ್ನು ಸಮಾಧಾನಪಡಿಸಿ, ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮೀಣ ಭಾಗದ ಜನರು ನೀರು ಬಿಟ್ಟರೆ ಬೇರೇನು ಕೇಳುತ್ತಿಲ್ಲ. ಅವರಿಗೆ ನಾವು ಉತ್ತರ ಕೊಡಲಾಗುತ್ತಿಲ್ಲ. ನೀರಿನ ವಿಚಾರದಲ್ಲಿ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

‘ನೀರು ಬತ್ತಿರುವ ಕೊಳವೆ ಬಾವಿಗಳನ್ನು ಸ್ಕ್ಯಾನಿಂಗ್ ಮಾಡಿಸಿ ಮತ್ತಷ್ಟು ಆಳಕ್ಕೆ ಕೊರೆಸಲು ₹ 46 ಲಕ್ಷ ಮೀಸಲಿಡಲಾಗಿದೆ. ಜಿಲ್ಲೆಯ 11 ಏಜೆನ್ಸಿಯವರಿಗೆ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ವಿವರಿಸಿದರು.

ಸಮಸ್ಯಾತ್ಮಕ ಗ್ರಾಮ: ‘ಜಿಲ್ಲೆಯಲ್ಲಿ ಒಟ್ಟು 170 ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಈ ಪೈಕಿ 51 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು ಉಳಿದ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಸಿಇಒ ದರ್ಶನ್ ಮಾಹಿತಿ ನೀಡಿದರು.

‘ಮೊದಲು ನೀರಿನ ಲಭ್ಯತೆ ಖಚಿತಪಡಿಸಿಕೊಂಡು ಹೊಸ ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗಿದೆ. ನೀರಿನ ಸಮಸ್ಯೆ ತುಂಬಾ ಗಂಭೀರವಾಗಿರುವ ಕಡೆ ರೈತರ ಕೊಳವೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗಾಗಿ 14ನೇ ಹಣಕಾಸು ಅನುದಾನ ಬಳಸಲಾಗುತ್ತಿದೆ. ₹ 1.75 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನೀರಿನ ಸಮಸ್ಯೆ ತೀವ್ರಗೊಳ್ಳಬಾರದು. ಹೆಚ್ಚಿನ ಅನುದಾನ ಬೇಕಿದ್ದರೆ ಕ್ರಿಯಾಯೋಜನೆ ರೂಪಿಸಿ. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ವೆಂಕಟೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಉಪ ವಿಭಾಗಾಧಿಕಾರಿ ಸೋಮಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.