ADVERTISEMENT

ಜಿಲ್ಲೆಯಲ್ಲಿ ಸೇವಾ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 15:21 IST
Last Updated 16 ಸೆಪ್ಟೆಂಬರ್ 2020, 15:21 IST

ಕೋಲಾರ: ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆಯಂತೆ ಸೇವಾ ಹೀ ಸಂಘಟನೆ ಎಂಬ ಪರಿಕಲ್ಪನೆಯಲ್ಲಿ ಅ.2ರವರೆಗೆ ಸೇವಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಂಡಿತ್ ದೀನ ದಯಾಳ್ ಉಪಾಧ್ಯಾಯ ಹಾಗೂ ಮಹಾತ್ಮಾ ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

‘ಪ್ರತಿ ವರ್ಷದಂತೆ ಸೇವಾ ಸಪ್ತಾಹದ ಜತೆಗೆ ವಿವಿಧ ಸೇವಾ ಚಟುವಟಿಕೆ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ಹುಟ್ಟು ಹಬ್ಬವನ್ನು ಗುರುವಾರ (ಸೆ.17) ಆಚರಿಸುತ್ತೇವೆ. ಜಿಲ್ಲಾ ಕೇಂದ್ರದ ಕೆಇಬಿ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದು, ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸಂದೀಪ್ ಶಿಬಿರ ಉದ್ಘಾಟಿಸುತ್ತಾರೆ’ ಎಂದು ವಿವರಿಸಿದರು.

ADVERTISEMENT

‘ಜಿಲ್ಲೆಯಲ್ಲಿ ನಡೆಯುವ ಸೇವಾ ಸಪ್ತಾಹದಲ್ಲಿ ಪ್ರತಿ ಮಂಡಲದ 70 ಅಂಗವಿಕಲರಿಗೆ ಕೃತಕ ಅಂಗ ಜೋಡಣೆ ಉಪಕರಣ ವಿತರಿಸುತ್ತೇವೆ. ಸರ್ಕಾರಿ ಆಸ್ಪತ್ರೆಗಳು ಹಾಗೂ ಬಡವರ ಕಾಲೊನಿಗಳಲ್ಲಿ ಹಣ್ಣು ಹಂಪಲು ವಿತರಿಸಲಾಗುವುದು. ಕೊರೊನಾ ಸೋಂಕಿತ 70 ವ್ಯಕ್ತಿಗಳಿಗೆ ಪ್ಲಾಸ್ಮಾ ದಾನ ಮಾಡಲಾಗುತ್ತದೆ. 70 ಬೂತ್‌ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ರಮ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ಸ್ವಚ್ಛತಾ ಅಭಿಯಾನ: ‘70 ಹಳ್ಳಿಗಳಲ್ಲಿ ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ನಿಷೇಧದ ಸಂಕಲ್ಪದೊಂದಿಗೆ 70 ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮ, ಮೋದಿಯವರ ಯೋಜನೆಗಳು ಹಾಗೂ ದೂರ ದೃಷ್ಟಿಕೋನ ಕುರಿತು 70 ಬೃಹತ್ ಸಮಾವೇಶ ನಡೆಸಲಾಗುವುದು. ಕೇಂದ್ರದ ಸಾಧನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಲಾಗುತ್ತದೆ’ ಎಂದರು.

‘ಸೆ.25ರಂದು ಎಲ್ಲಾ ಬೂತ್‌ಗಳಲ್ಲಿ ಪಂಡಿತ್‌ ದೀನ ದಯಾಳ್ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಲಾಗುವುದು. ಜತೆಗೆ ಉಪನ್ಯಾಸ ಆಯೋಜಿಸಲಾಗುವುದು. ಗಾಂಧಿ ಜಯಂತಿ ದಿನ ಖಾದಿ ಉಪಯೋಗ ಹಾಗೂ ದೇಸಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಅಭಿಯಾನ ನಡೆಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.