ADVERTISEMENT

ಡಿಡಿಪಿಐ ಕಚೇರಿಗೆ ಎಸ್ಎಫ್‌ಐ ಸದಸ್ಯರ ಮುತ್ತಿಗೆ

ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ನಿರ್ಧಾರಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2018, 14:44 IST
Last Updated 13 ಆಗಸ್ಟ್ 2018, 14:44 IST
ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎಸ್‌ಎಫ್‌ಐ ಸದಸ್ಯರು ಕೋಲಾರದಲ್ಲಿ ಸೋಮವಾರ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎಸ್‌ಎಫ್‌ಐ ಸದಸ್ಯರು ಕೋಲಾರದಲ್ಲಿ ಸೋಮವಾರ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.   

ಕೋಲಾರ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯರು ಇಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

‘ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉದ್ದೇಶದಿಂದ ಶಾಲೆಗಳ ವಿಲೀನಕ್ಕೆ ಮುಂದಾಗಿದೆ. ಈ ನಿರ್ಧಾರದಿಂದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರವು ಜೂನ್ ತಿಂಗಳಲ್ಲಿ 28,847 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನ ಮಾಡುವ ಪ್ರಸ್ತಾಪ ಮಾಡಿತ್ತು. ಇದಕ್ಕೆ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆದರೂ ಸರ್ಕಾರ ಈಗ ಶಾಲೆಗಳ ವಿಲೀನ ಆದೇಶ ಹೊರಡಿಸಿದೆ’ ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವರೆಡ್ಡಿ ದೂರಿದರು.

ADVERTISEMENT

‘ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಬಡ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಸಂಚು ರೂಪಿಸಿದೆ. ಕಡಿಮೆ ದಾಖಲಾತಿಯ ನೆಪವೊಡ್ಡಿ ಶಾಲೆಗಳ ವಿಲೀನದ ಸೋಗಿನಲ್ಲಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಹಲವು ಸಚಿವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ಸಚಿವರ ಹಿತ ರಕ್ಷಣೆಗಾಗಿ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದು ಸರ್ಕಾರದ ಹುನ್ನಾರ’ ಎಂದು ಟೀಕಿಸಿದರು.

ಖಂಡನೀಯ: ‘ಸರ್ವರಿಗೂ ಉಚಿತ ಹಾಗೂ ಗುಣಮಟ್ಟದ ಸಮಾನ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ, ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರ ಪರೋಕ್ಷವಾಗಿ ಶಿಕ್ಷಣದ ಖಾಸಗೀಕರಣಕ್ಕೆ ಒತ್ತು ನೀಡುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ನೀಡಿರುವ ವರದಿ ಅನುಷ್ಠಾನಗೊಳಿಸದೆ ಶಾಲೆಗಳನ್ನೇ ಮುಚ್ಚಲು ಹೊರಟಿರುವುದು ಖಂಡನೀಯ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಶೂನ್ಯ ದಾಖಲಾತಿಯ ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ. ಜಿಲ್ಲೆಯಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಶಾಲೆಗಳ ವಿಲೀನ ನಿಲ್ಲಿಸಬೇಕು. ಶಾಲಾ ಸಬಲೀಕರಣ ವರದಿ ಜಾರಿಗೆ ಆಯೋಗ ರಚಿಸಬೇಕು. ಶಿಕ್ಷಕರ ಹುದ್ದೆಗಳನ್ನು ತುಂಬಲು ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಶಾಲೆಗಳನ್ನು ಮುಚ್ಚುವ ಬದಲು ಎಲ್ಲಾ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ತೀವ್ರ ಹೋರಾಟ: ‘ಬಿಜೆಪಿ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದಗೌಡರು ಅವರು 3,174 ಹಾಗೂ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದ್ದರು. ಆಗ ಸಂಘಟನೆಯು ರಾಜ್ಯದೆಲ್ಲೆಡೆ ಹೋರಾಟ ನಡೆಸಿದ್ದರಿಂದ ಆ ನಿರ್ಧಾರ ಕೈಬಿಡಲಾಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಶಾಲೆ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಎಸ್‌ಎಫ್‌ಐ ತಾಲ್ಲೂಕು ಘಟಕದ ಕಾರ್ಯದರ್ಶಿ ಶ್ರೀಕಾಂತ್, ಉಪಾಧ್ಯಕ್ಷ ಮುಸ್ತಾಫ್, ಪದಾಧಿಕಾರಿಗಳಾದ ಅವಿನಾಶ್, ರಾಜೇಶ್, ಅಜಯ್, ಬಾಬು, ಪ್ರತಿಭಾ, ಸೌಮ್ಯ ಪಾಲ್ಗೊಂಡಿದ್ದರು.

* 2,515 ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ
* 27,039 ಶಾಲೆಗಳ ದುರಸ್ತಿ ಆಗಬೇಕು
* 8,399 ಶಾಲೆಗಳಲ್ಲಿ ಕುಡಿಯುವ ನೀರಿಲ್ಲ
* 13,000 ಶಾಲೆಗಳಲ್ಲಿ ಶೌಚಾಲಯವಿಲ್ಲ
* 32,512 ಶಿಕ್ಷಕರ ಕೊರತೆ ಇದೆ
* 14,451 ಶಾಲೆಗಳನ್ನು ಮುಚ್ಚಲು ನಿರ್ಧಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.