
ಕೋಲಾರ: ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ 225ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನದ ಅಂಗವಾಗಿ ಈಚೆಗೆ ಶೇಕ್ಸ್‌ಪಿಯರ್ ರಚಿತ ಮ್ಯಾಕ್‌ಬೆತ್ ನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳ ಮಾತಿನ ಜೊತೆ ಬಸ್ ಚಾಲಕ, ನಿರ್ವಾಹಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕೆಎಸ್‌ಆರ್‌ಟಿಸಿ ಕೋಲಾರ ವಿಭಾಗೀಯ ಯಾಂತ್ರಿಕ ಎಂಜಿನಿಯರ್, ಕವಿ ಶಾಂತಕುಮಾರ್ ಎಚ್.ಎಸ್., ಸಾವಿತ್ರಿಬಾಯಿ ಫುಲೆ ಅವರ ಜನನ, ಬೆಳವಣಿಗೆ, ಜೀವನದಲ್ಲಿ ಕೈಗೊಂಡ ಅಕ್ಷರ ಚಳವಳಿಯ ಪ್ರಸಂಗಗಳನ್ನು ಮೆಲುಕು ಹಾಕಿದರು.
ಶ್ರೀ ದೇವರಾಜ ಅರಸು ಮಹಾವಿದ್ಯಾಲಯದ ಕುಲಸಚಿವ ಡಾ.ಮುನಿನಾರಾಯಣ ಸಿ. ಮಾತನಾಡಿ, ‘ನಾವು ಪ್ರತಿ ವರ್ಷವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತೇವೆ. ಬೇರೆ ಬೇರೆ ಭಾಗಗಳಿಂದ ತಂಡಗಳನ್ನು ಕರೆಸಿಕೊಳ್ಳುತ್ತೇವೆ. ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ ಅವರನ್ನು ಭೇಟಿಯಾಗಿ ಕೇಳಿದಾಗ ಇಲ್ಲಿನ ತಂಡ ಕಳುಹಿಸಿಕೊಟ್ಟಿದ್ದರು. ಕಾರ್ಯಕ್ರಮ ಚೆನ್ನಾಗಿ ಮೂಡಿಬಂತು. ಆದಿಮದೊಂದಿಗೆ ನಾವೂ ಇರುತ್ತೇವೆ’ ಎಂದರು.
ಮ್ಯಾಕ್‌ಬೆತ್ ನಾಟಕವನ್ನು ಆದಿಮ ರಂಗ ಶಿಕ್ಷಣ ಕೇಂದ್ರ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಬೆಟ್ಟದ ಬಸ್ಸಿನ ಚಾಲಕ ಸೈಯದ್ ಬಾಬಾ ಜಾನ್ ಹಾಗೂ ನಿರ್ವಾಹಕ ಸುಬ್ರಮಣಿ ಅವರನ್ನು ಆದಿಮ ಸಂಸ್ಥೆ ಸನ್ಮಾನಿಸಿ ಗೌರವಿಸಿತು.
ವೇದಿಕೆಯಲ್ಲಿ ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಆರ್.ಹನುಮಂತರಾಯ, ನಿವೃತ್ತ ಪ್ರಾಧ್ಯಾಪಕಿ ಮೈಸೂರಿನ ಶಶಿಕಲಾ ದೇವ ಎ, ದೊಡ್ಡವಲಗಮಾದಿ ಗ್ರಾಮ ಪಂಚಾಯಿತಿ, ಕಾರ್ಯದರ್ಶಿ ಎಚ್.ರತ್ನಮ್ಮ ನಾಗರಾಜ್, ಆದಿಮ ಆಡಳಿತಾಧಿಕಾರಿ ರಮೇಶ್ ಅಗ್ರಹಾರ, ನಾಯಕ್, ನಾರಾಯಣಸ್ವಾಮಿ ಇದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಕೆ.ವಿ.ಕಾಳಿದಾಸ್, ಸ್ವಾಗತವನ್ನು ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ, ವಂದನಾರ್ಪಣೆ ಹಾಗೂ ಸನ್ಮಾನಿತರ ಪರಿಚಯವನ್ನು ನಾವೆಂಕಿ ಕೋಲಾರ ನಡೆಸಿಕೊಟ್ಟರು. ಅಶ್ವತ್ ಬಸವಣ್ಣ ವಚನ ಹಾಡಿದರು, ಜಗದೀಶ್ ಆರ್. ಜಾಣಿ ಆದಿಮ ಆಶಯಗೀತೆ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.