ADVERTISEMENT

ಕೋಲಾರ| ಕಲಾವಿದರಿಗೆ ಉತ್ತೇಜನ ನೀಡುವ ಕೆಲಸವಾಗಲಿ: ಸಾಹಿತಿ ಗೊ.ರು.ಚನ್ನಬಸಪ್ಪ

ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ -2024 ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:14 IST
Last Updated 23 ಜನವರಿ 2026, 7:14 IST
ಕೋಲಾರದಲ್ಲಿ ಗುರುವಾರ ಸೋಬಾನೆ ಕೆಂಪಮ್ಮ ಹಾಗೂ ಜಾನಪದ ಗಾಯಕ ಎನ್. ಮೋಹನ್ ಅವರಿಗೆ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ -2024 ಪ್ರದಾನ ಮಾಡಿದರು
ಕೋಲಾರದಲ್ಲಿ ಗುರುವಾರ ಸೋಬಾನೆ ಕೆಂಪಮ್ಮ ಹಾಗೂ ಜಾನಪದ ಗಾಯಕ ಎನ್. ಮೋಹನ್ ಅವರಿಗೆ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ -2024 ಪ್ರದಾನ ಮಾಡಿದರು   

ಕೋಲಾರ: ಶರಣ ಸಾಹಿತ್ಯದ ವಚನ, ಜಾನಪದ ಕ್ರಾಂತಿಕಾರಿ ಸಂದೇಶಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಪಡೆದುಕೊಳ್ಳಬೇಕು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ ಗೌರವ ಸಲಹೆಗಾರ, ಸಾಹಿತಿ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಹಯೋಗದಿಂದ ಗುರುವಾರ ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ -2024 ಪ್ರದಾನ ಮಾಡಿ ಮಾತನಾಡಿದರು.

ಅಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಪಸರಿಸಲು ಪರಿಷತ್​ ಅನ್ನು ಅಸ್ತಿತ್ವಕ್ಕೆ ತರಲಾಗಿದೆ. 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಾಮರಸ್ಯಗಳನ್ನು ಮುಂದಿನ ಪೀಳಿಗೆಗಳಿಗೆ ಸಂದೇಶ ಸಾರುವ ಉದ್ದೇಶವಾಗಿದೆ ಎಂದರು.

ADVERTISEMENT

ಚಿನ್ನದ ನಾಡಿನ ಜಿಲ್ಲಾ ಶರಣ ಸಾಹಿತ್ಯ ಪರಿಷತ್​ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಜಾನಪದ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.

ಶರಣ ಸಾಹಿತ್ಯ ಪರಿಷತ್​ನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್​ ಮಾತನಾಡಿ, ‘ಮಾನಸಿಕ ಸಮಾಧಾನಕ್ಕಾದರೂ ಜಾನಪದ, ಸಂಸ್ಕೃತಿ ಉಳಿವಿಗಾಗಿ ಸರ್ಕಾರಗಳು ಕ್ರಮವಹಿಸಬೇಕಿದೆ. ಬಜೆಟ್​ಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಿ ಕಲಾವಿದರಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಬಿ.ಸುರೇಶ್​ ಮಾತನಾಡಿ, ‘ಶರಣ ಸಾಹಿತ್ಯ ಪರಿಷತ್​ ಸೂತ್ತೂರು ಶ್ರೀಗಳು ಸ್ಥಾಪಿಸಿದ್ದು, ವಚನಗಳು, ದಾಸರ ಪದಗಳು ಜನರಿಗೆ ತಲುಪಿಸುವ ದೆಸೆಯಲ್ಲಿ ಪರಿಷತ್​ ಮುಂಚೂಣಿಯಲ್ಲಿದೆ’ ಎಂದು ಹೇಳಿದರು.

ಸಾಮಾನ್ಯ ಜನರಿಗೆ ಜ್ಞಾನದ ಸಂಪತ್ತು ತಲುಪಿಸುವಂತ ಕಾಯಕದಲ್ಲಿ ಪರಿಷತ್​ ತೊಡಗಿಸಿಕೊಂಡಿದೆ. ಹಳಘಟ್ಟಿ ಅವರು ವಚನಗಳ ಸಂಶೋಧನೆ ಮತ್ತು ಸಂಗ್ರಹಗಳ ಮೂಲಕ ವಚನಗಳನ್ನು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ವಚನ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್​ ಮಾತನಾಡಿ, ‘12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ, ಜಾತ್ಯತೀತ ಸಂದೇಶ ಸಾರುವುದರ ಜತೆಗೆ ಕ್ರಾಂತಿಕಾರಿ ಚಳವಳಿಯನ್ನು ಮಾಡಿದರು’ ಎಂದು ಹೇಳಿದರು.

ತತ್ವದ ಆಚಾರ ವಿಚಾರಗಳನ್ನು ವಚನದ ಮೂಲಕ ಜ್ಞಾನ ವಿಕಾಸವನ್ನು ಪಸರಿಸಿದರು. ಶಿಕ್ಷಣ, ಸಮಾನತೆ, ಸಾರ್ವಜನಿಕರ ಸ್ವತ್ತು ಎಂಬುವುದನ್ನು ಪ್ರತಿಪಾದಿಸುವ ಮೂಲಕ ರಾಜ್ಯದ ನಾಡ ಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸಿ ಸರ್ವರಿಗೂ ಉಣಬಡಿಸಿ ಜ್ಞಾನಾಭಿವೃದ್ಧಿಸಿದ್ದಾರೆ ಎಂದು ಬಣ್ಣಿಸಿದರು.

ಬುದ್ಧ, ಬಸವ, ಅಂಬೇಡ್ಕರ್​ ಇವರೇ ಸಮಾಜದಲ್ಲಿ ಮಾನವೀಯತೆಗೆ ಮುನ್ನುಡಿ ಬರೆದ ಸಮಾಜದ ಅಭಿವೃದ್ಧಿ ಹರಿಕಾರರು. ಸಮಾಜದಲ್ಲಿ ಬಹುತೇಕರು ಬದುಕಿಯೂ ಸತ್ತಂತೆ ಇದ್ದರೆ, ಇನ್ನು ಕೆಲವರು ಸತ್ತರೂ ಬದುಕಿದಂತೆ ಇರುತ್ತಾರೆ. ಈ ತ್ರಿಮೂರ್ತಿಗಳ ತತ್ವ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ತಿಳಿಸಿದರು.

ಜಾನಪದ ಸಾಹಿತ್ಯದ ಹಿರಿಯ ಪ್ರತಿಭೆ ಮಂಡ್ಯದ ಸೋಬಾನೆ ಕೆಂಪಮ್ಮ ಹಾಗೂ ಜಾನಪದ ಗಾಯಕ ತುಮಕೂರು ಜಿಲ್ಲೆಯ ಬೆಳ್ಳಾವಿಯ ಎನ್​.ಮೋಹನ್​ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಬಿ.ಎಂ.ಚೆನ್ನಪ್ಪ, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್​, ಕೆ.ಆರ್​.ಲಿಂಗಪ್ಪ ಅವರ ಪುತ್ರ ಡಾ.ಪಂಚಾಕ್ಷರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.