ADVERTISEMENT

ಕಬಡ್ಡಿ ವಿಜೇತ ತಂಡಕ್ಕೆ ಟಗರು ಬಹುಮಾನ

ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 15:55 IST
Last Updated 11 ಫೆಬ್ರುವರಿ 2021, 15:55 IST
ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮುಳಬಾಗಿಲಿನ ಮಹಿಳಾ ನೌಕರರ ತಂಡಕ್ಕೆ ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಬಹುಮಾನವಾಗಿ ಟಗರು ನೀಡಿದರು.
ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮುಳಬಾಗಿಲಿನ ಮಹಿಳಾ ನೌಕರರ ತಂಡಕ್ಕೆ ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಬಹುಮಾನವಾಗಿ ಟಗರು ನೀಡಿದರು.   

ಕೋಲಾರ: ಇಲ್ಲಿನ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 2 ದಿನದಿಂದ ನಡೆಯುತ್ತಿದ್ದ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಗುರುವಾರ ಮುಕ್ತಾಯವಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅವರು ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮುಳಬಾಗಿಲು ಮಹಿಳಾ ನೌಕರರ ತಂಡಕ್ಕೆ ಟಗರು ಹಾಗೂ ಕೋಲಾರ ತಾಲ್ಲೂಕಿನ ರನ್ನರ್ಸ್‌ ತಂಡಕ್ಕೆ ₹ 4 ಸಾವಿರ ಬಹುಮಾನ ನೀಡಿದರು.

ಬಳಿಕ ಮಾತನಾಡಿದ ವೆಂಕಟೇಶ್‌, ‘ಆರೋಗ್ಯ ನಿರ್ವಹಣೆಗೆ ಕ್ರೀಡೆ ಅಮೂಲ್ಯ ಸಾಧನ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಭಾಗವಹಿಸುವಿಕೆ ಮುಖ್ಯ. ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಒತ್ತಡ ನಿವಾರಣೆಯಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಆಧುನಿಕತೆ ಬೆಳೆದಂತೆ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಹಿಂದೆ ಗ್ರಾಮೀಣ ಕ್ರೀಡೆಗಳು ಹೆಚ್ಚು ಚಾಲ್ತಿಯಲ್ಲಿದ್ದವು. ಆದರೆ, ಈಗ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿದಿವೆ. ದೈಹಿಕ ಚಟುವಟಿಕೆ ಕಡಿಮೆಯಾಗಿರುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ರೋಗ ನಿವಾರಣೆಗೆ ಕ್ರೀಡೆ ಒಳ್ಳೆಯ ಮದ್ದು’ ಎಂದು ಸಲಹೆ ನೀಡಿದರು.

‘ದೈಹಿಕ ಸದೃಢತೆ ಹೆಚ್ಚು ಮಹತ್ವ ಪಡೆದಿದೆ. ಕುಡಿಯುವ ನೀರು, ಸೇವಿಸುವ ಗಾಳಿ, ತಿನ್ನುವ ಆಹಾರದ ಗುಣಮಟ್ಟದಲ್ಲಿ ವ್ಯತ್ಯಾಸವಾದರೆ ಆರೋಗ್ಯ ಹಾಳಾಗುತ್ತದೆ. ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಒತ್ತಡಕ್ಕೆ ಸಿಲುಕಬೇಕಾಗುತ್ತದೆ. ವ್ಯಾಯಾಮ, ಯೋಗ, ಉತ್ತಮ ಆಹಾರ ಸೇವನೆ ಅತ್ಯಗತ್ಯ’ ಎಂದರು.

ಜಿಲ್ಲೆಗೆ ಕೀರ್ತಿ ತನ್ನಿ: ‘ಕ್ರೀಡಾಕೂಟದಲ್ಲಿ ಮಹಿಳಾ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದೀರಿ. ಅಲ್ಲದೇ, ಕಬಡ್ಡಿ ಸ್ಪರ್ಧೆಯಲ್ಲಿ ಬಹುಮಾನವಾಗಿ ಟಗರು ಗೆದ್ದು ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲವೆಂದು ಸಾಬೀತುಪಡಿಸಿದ್ದೀರಿ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಹೋಗುತ್ತಿದ್ದೀರಿ. ಅಲ್ಲಿಯೂ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತನ್ನಿ’ ಎಂದು ಆಶಿಸಿದರು.

ಕ್ರೀಡಾ ಸ್ಫೂರ್ತಿ: ‘ಸರ್ಕಾರಿ ನೌಕರರ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡಾಕೂಟ ಉತ್ತಮ ವೇದಿಕೆ. ನೌಕರರು ವೃತ್ತಿ ಬದುಕಿನ ಜಂಜಾಟ ಬಿಟ್ಟು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಜೀವನದಲ್ಲೂ ಕ್ರೀಡಾ ಸ್ಫೂರ್ತಿ ಇರಬೇಕು’ ಎಂದು ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಹೇಳಿದರು.

‘ಸರ್ಕಾರಿ ನೌಕರರು ಕರ್ತವ್ಯದ ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ಕಾರ್ಯದೊತ್ತಡದಿಂದ ನೌಕರರಿಗೆ ರಕ್ತದೊತ್ತಡ, ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೌಕರರು ಆರೋಗ್ಯ ಸಮಸ್ಯೆಯಿಂದ ದೂರಾಗಲು ಕ್ರೀಡೆಗಳಲ್ಲಿ ಭಾಗವಹಿಸಬೇಕು. ದೈಹಿಕ ಆರೋಗ್ಯಕ್ಕೆ ವ್ಯಾಯಾಮ ಸಹಕಾರಿ’ ಎಂದರು.

ಸರ್ವೆ ಇಲಾಖೆ ಉಪ ನಿರ್ದೇಶಕ ಗೋಪಾಲಯ್ಯ, ಜಿ.ಪಂ ಕಾರ್ಯ ನಿರ್ವಾಹಕ ಎಂಜಿನಿಯರ್‌ ನಾಗರಾಜ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಗೌರವಾಧ್ಯಕ್ಷ ರವಿಚಂದ್ರ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ನಾಗರಾಜ್, ಕಾರ್ಯದರ್ಶಿ ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.