ADVERTISEMENT

ಛತ್ರಪತಿ ಶಿವಾಜಿ ಧರ್ಮ ಸಹಿಷ್ಣು

ಶಿವಾಜಿ ಜಯಂತಿಯಲ್ಲಿ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:15 IST
Last Updated 19 ಫೆಬ್ರುವರಿ 2020, 20:15 IST
ಕೋಲಾರದಲ್ಲಿ ಬುಧವಾರ ನಡೆದ ಶಿವಾಜಿ ಜಯಂತಿಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಮಾತನಾಡಿದರು.
ಕೋಲಾರದಲ್ಲಿ ಬುಧವಾರ ನಡೆದ ಶಿವಾಜಿ ಜಯಂತಿಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಮಾತನಾಡಿದರು.   

ಕೋಲಾರ: ‘ದಲಿತರು, ಮುಸ್ಲಿಮರು ಹಾಗೂ ಬುಡಕಟ್ಟು ಜನಾಂಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಛತ್ರಪತಿ ಶಿವಾಜಿ ಧರ್ಮ ಸಹಿಷ್ಣುವಾಗಿದ್ದರು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿಯಲ್ಲಿ ಮಾತನಾಡಿ, ‘ಛತ್ರಪತಿ ಶಿವಾಜಿ ಮಹಾರಾಜ ಹಿಂದು ಸಾಮ್ರಾಜ್ಯ ಸ್ಥಾಪಕ ಮಾತ್ರವಲ್ಲ, ಜಾತ್ಯಾತೀತ ಪರಿಕಲ್ಪನೆ ಹೊಂದಿದ್ದ ಮಹಾನ್ ವ್ಯಕ್ತಿ’ ಎಂದು ಬಣ್ಣಿಸಿದರು.

‘ಮರಾಠಿ ಸಮುದಾಯದವರು ಸಂಘಟಿತರಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಜಿಲ್ಲೆಯಲ್ಲಿ ಮರಾಠಿ ಸಮುದಾಯದವರ ಸಂಖ್ಯೆ ಕಡಿಮೆಯಿದ್ದರೂ ಮತ್ತೊಬ್ಬರಿಗೆ ತೊಂದರೆ ನೀಡದಂತೆ ಬದುಕುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಶಿವಾಜಿ ಮಹಾರಾಜರ ಬಾಂಧವ್ಯ ರಾಜ್ಯಕ್ಕೂ ಪಸರಿಸಿತ್ತು. ತಾಯಿ ಜೀಜಾಬಾಯಿ ನೀಡಿದ ಸ್ಫೂರ್ತಿ, ಧೈರ್ಯ, ಹಿಂದೂ ಸಂಸ್ಕೃತಿ, ತತ್ವಗಳ ಅರಿವು ಅವರನ್ನು ಸಾಹಸಿ ವ್ಯಕ್ತಿಯಾಗಿಸಿತು. ರಾಮದಾಸರು, ತುಕಾರಾಂ, ಏಕನಾಥ ಅವರಂತಹ ಸಂತರಿಂದ ಶಿವಾಜಿ ಪ್ರೇರೇಪಿತರಾಗಿದ್ದರು. ದೇಶಪ್ರೇಮ, ಏಕತೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಿಂದೂ ಸಾಮ್ರಾಜ್ಯ ಸ್ಥಾಪಿಸುವ ಕನಸು ಅವರದಾಗಿತ್ತು’ ಎಂದರು.

ಆದರ್ಶಪ್ರಾಯ: ‘ಮರಾಠಿಗರು ಬೇರೆ ರಾಜ್ಯದವರಾದರೂ ಕರ್ನಾಟಕದಲ್ಲಿ ಕನ್ನಡಿಗರಾಗಿ ಕನ್ನಡ ಭಾಷೆ ಪ್ರೀತಿಸಿ ಗೌರವಿಸುತ್ತಿದ್ದಾರೆ. ಮರಾಠ ಸಮುದಾಯದವರು ಧೈರ್ಯ, ಸಾಮರ್ಥ್ಯ, ಸಾಹಸ, ಸ್ವಾಭಿಮಾನವುಳ್ಳವರು. ಮಹನೀಯರನ್ನು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಚೌಕಟ್ಟಿಗೆ ಸೀಮಿತಗೊಳಿಸುವುದು ಸೂಕ್ತವಲ್ಲ’ ಎಂದು ಕಿವಿಮಾತು ಹೇಳಿದರು.

‘ಭಕ್ತಿ ಪಂಥ ಮತ್ತು ಕಾಯಕ ಪಂಥ ಚಳವಳಿಯಿಂದ ಪ್ರಭಾವಿತರಾದ ಶಿವಾಜಿ ಜೀವನದ ಕಟ್ಟಕಡೆಯವರೆಗೂ ಎಲ್ಲಾ ಜಾತಿ, ಧರ್ಮದವರನ್ನು ಗೌರವಿಸಿದರು. ಚಿಕ್ಕ ವಯಸ್ಸಿನಲ್ಲೇ ಹಲವು ಸಂಗತಿ ಕಲಿತು ವಿವಿಧ ಕ್ಷೇತ್ರಗಳ ತಜ್ಞರ ಮಾರ್ಗದರ್ಶನ ಪಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ. ಶಿವಾಜಿಯ ವೀರಾವೇಶ, ಧೈರ್ಯ ಪ್ರತಿಯೊಬ್ಬರಲು ಮೂಡಬೇಕು’ ಎಂದು ಆಶಿಸಿದರು.

ಒಗ್ಗಟ್ಟಿನ ಸಂಕೇತ: ‘ಶಿವಾಜಿ ಜಯಂತಿ ಒಗ್ಗಟ್ಟಿನ ಸಂಕೇತ. ಶಿವಾಜಿ ಜಯಂತಿಯನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಆಚರಿಸಲಾಗುತ್ತಿದೆ. ವ್ಯಾಪಾರದ ಉದ್ದೇಶಕ್ಕೆ ಭಾರತಕ್ಕೆ ಬಂದ ಬ್ರಿಟೀಷರು ಇಲ್ಲಿನ ರಾಜರಿಗೆ ಆಮಿಷವೊಡ್ಡಿ ಇಡೀ ದೇಶ ಆಕ್ರಮಿಸಿದರು. ಇಲ್ಲಿನ ಸಂಪತ್ತು ಲೂಟಿ ಮಾಡಿದರು. ಅವರ ವಿರುದ್ಧ ಹೋರಾಟ ಮಾಡಿದ ಮಹಾರಾಜರ ಸಾಲಿನಲ್ಲಿ ಛತ್ರಪತಿ ಶಿವಾಜಿ ಪ್ರಮುಖರು’ ಎಂದು ತಹಶೀಲ್ದಾರ್‌ ಶೋಭಿತಾ ಬಣ್ಣಿಸಿದರು.

‘ಶಿವಾಜಿಯ ಗೆರಿಲ್ಲಾ ಕದನ ಪದ್ಧತಿ ಅನುಕರಣೀಯ. ಶಿವಾಜಿ ಹಿಂದೂ ಧರ್ಮದ ಉದ್ಧಾರಕರಾಗಿ ಹಿಂದೂ ಧರ್ಮ ಎತ್ತಿ ಹಿಡಿಯುವ ಕೆಲಸ ಮಾಡಿದರು. ಶಿವಾಜಿ ಮಹಾರಾಜರೆಂದರೆ ವಿರೋಧಿಗಳಿಗೆ ಭಯವಾಗುತ್ತಿತ್ತು. ಮಹನೀಯರು ಪ್ರತಿಯೊಬ್ಬರಿಗೂ ಮಾದರಿ. ಜೀವನದಲ್ಲಿ ಅವರ ತತ್ವಾದರ್ಶ ಪಾಲಿಸಬೇಕು. ಆಗ ಮಾತ್ರ ಜಯಂತಿ ಆಚರಣೆಗೆ ಮಹತ್ವ ಬರುತ್ತದೆ’ ಎಂದರು.

ಉಪನ್ಯಾಸಕ ರಾಕೇಶ್ ಶಿವಾಜಿ ಕುರಿತು ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಮರಾಠ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.