ADVERTISEMENT

ಠೇವಣಿ ಆಧಾರದಲ್ಲಿ ಮಳಿಗೆ ಹಂಚಿಕೆ

ನಗರಸಭೆ ಸಭೆಯಲ್ಲಿ ಸರ್ವಾನುಮತದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 17:25 IST
Last Updated 6 ಸೆಪ್ಟೆಂಬರ್ 2021, 17:25 IST
ನಗರಸಭೆ ವಾಣಿಜ್ಯ ಮಳಿಗೆಗಳ ಹಂಚಿಕೆ ಸಂಬಂಧ ಕೋಲಾರದಲ್ಲಿ ಸೋಮವಾರ ನಡೆದ ತುರ್ತು ಸಭೆಯಲ್ಲಿ ಸದಸ್ಯರು ಪಾಲ್ಗೊಂಡರು
ನಗರಸಭೆ ವಾಣಿಜ್ಯ ಮಳಿಗೆಗಳ ಹಂಚಿಕೆ ಸಂಬಂಧ ಕೋಲಾರದಲ್ಲಿ ಸೋಮವಾರ ನಡೆದ ತುರ್ತು ಸಭೆಯಲ್ಲಿ ಸದಸ್ಯರು ಪಾಲ್ಗೊಂಡರು   

ಕೋಲಾರ: ನಗರಸಭೆ ವಾಣಿಜ್ಯ ಮಳಿಗೆಗಳನ್ನು ಠೇವಣಿ ಆಧಾರದಲ್ಲಿ ಹರಾಜು ಕೂಗಿರುವ ವರ್ತಕರಿಗೆ ಹಂಚಿಕೆ ಮಾಡಲು ನಗರಸಭೆ ತುರ್ತು ಸಭೆಯಲ್ಲಿ ಸೋಮವಾರ ನಿರ್ಧರಿಸಲಾಯಿತು. ವಾಣಿಜ್ಯ ಮಳಿಗೆಗಳ ಹಂಚಿಕೆ ಸಂಬಂಧ ಇಲ್ಲಿ ನಡೆದ ತುರ್ತು ಸಭೆಯಲ್ಲಿ ಕಾನೂನಾತ್ಮಕ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆಯಾಯಿತು.

‘ನಗರಸಭೆಯ 244 ಮಳಿಗಗಳ ಪೈಕಿ 18 ಮಳಿಗೆಗಳು ಹಳೇ ಬಸ್ ನಿಲ್ದಾಣದಲ್ಲಿದ್ದು, ಈ ಮಳಿಗೆಗಳನ್ನು 12 ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಲಾಗಿದೆ. ಅವಧಿ ಮುಗಿದಿರುವ 226 ಮಳಿಗೆಗಳ ಹರಾಜು ಸಂಬಂಧ 2014ರಲ್ಲಿ ಶೇ 300ರಷ್ಟು ಠೇವಣಿ ಹೆಚ್ಚಳ ಮಾಡಲಾಗಿತ್ತು’ ಎಂದು ನಗರಸಭೆ ಕಂದಾಯ ನಿರೀಕ್ಷಕ ಚಂದ್ರು ಸಭೆಗೆ ಮಾಹಿತಿ ನೀಡಿದರು.

‘ಹಳೇ ಬಾಡಿಗೆದಾರರನ್ನು ಮುಂದುವರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದ ಸರ್ಕಾರ 2015ರಲ್ಲಿ ಹೊಸದಾಗಿ ಮಳಿಗೆಗಳನ್ನು ಹರಾಜು ಹಾಕುವಂತೆ ನಿರ್ದೇಶನ ನೀಡಿತ್ತು. ಸರ್ಕಾರದ ಆದೇಶದಂತೆ ಮಳಿಗೆಗಳ ಹರಾಜಿಗೆ ಪ್ರಕಟಣೆ ಹೊರಡಿಸಲಾಗಿತ್ತು. ನಂತರ ಠೇವಣಿ ಮೇಲೆ ಹರಾಜು ಕರೆದಿರುವುದನ್ನು ಪ್ರಶ್ನಿಸಿ ಕೆಲ ಹಳೇ ಬಾಡಿಗೆದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು’ ಎಂದು ವಿವರಿಸಿದರು.

ADVERTISEMENT

‘ಹಳೇ ಬಾಡಿಗೆದಾರರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಠೇವಣಿ ಅಥವಾ ಬಾಡಿಗೆ ಆಧಾರದಲ್ಲಿ ಮಳಿಗೆಗಳನ್ನು ಹರಾಜು ಹಾಕಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ನಿರ್ದೇಶನ ನೀಡಿತ್ತು. ಆ ಪ್ರಕಾರ 226 ಮಳಿಗೆಗಳ ಪೈಕಿ 220 ಮಳಿಗೆಗಳನ್ನು ಬಾಡಿಗೆ ಮತ್ತು ಠೇವಣಿ ಆಧಾರದಲ್ಲಿ ಹರಾಜು ಹಾಕಲಾಗಿತ್ತು. 6 ಮಳಿಗೆಗಳು ಹರಾಜು ಆಗಿರಲಿಲ್ಲ. ಯಶಸ್ವಿ ಹರಾಜುದಾರರಿಗೆ ಬಾಡಿಗೆ ಅಥವಾ ಠೇವಣಿ ಆಧಾರದಲ್ಲಿ ಮಳಿಗೆ ನೀಡುವ ಬಗ್ಗೆ ನಗರಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ’ ಎಂದರು.

‘ನ್ಯಾಯಾಲಯದ ಸೂಚನೆಯಂತೆ ಹಿಂದಿನ ಸಭೆಯಲ್ಲಿ ಈ ವಿಷಯ ಮಂಡಿಸಿದಾಗ ಕಾನೂನು ಸಲಹೆ ಪಡೆದು ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿತ್ತು. ನಗರಸಭೆ ಪರ ವಕೀಲರ ಸಲಹೆ ಅನ್ವಯ ಮಳಿಗೆಗಳ ಹಂಚಿಕೆ ಪ್ರಕ್ರಿಯೆ ನಡೆಸಬೇಕಿದೆ’ ಎಂದು ವಿವರಿಸಿದರು.

ಪರಸ್ಪರ ವಾಗ್ವಾದ: ಸಭೆಯಲ್ಲಿ ಸದಸ್ಯ ಬಿ.ಎಂ.ಮುಬಾರಕ್‌ ಮಾತನಾಡುತ್ತಿದ್ದಾಗ ಉಪಾಧ್ಯಕ್ಷ ಪ್ರವೀಣ್‌ಗೌಡ ಅವರು ಮಧ್ಯೆ ಮಾತನಾಡಲು ಮುಂದಾದರು. ಆಗ ಮುಬಾರಕ್‌, ‘ದಯವಿಟ್ಟು ಕುಳಿತುಕೊಳ್ಳಿ. ಅಧ್ಯಕ್ಷರ ಅನುಮತಿ ಪಡೆದು ಮಾತನಾಡಿ’ ಎಂದು ಆಕ್ಷೇಪಿಸಿದರು. ಇದರಿಂದ ಪರಸ್ಪರರ ಮಧ್ಯೆ ವಾಗ್ವಾದ ನಡೆದು ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಆಗ ಮಧ್ಯಪ್ರವೇಶಿಸಿದ ನಗರಸಭೆ ಅಧ್ಯಕ್ಷೆ ಶ್ವೇತಾ, ‘ಉಪಾಧ್ಯಕ್ಷರು ಮಾತನಾಡಲು ನನ್ನ ಅನುಮತಿ ಪಡೆದಿಲ್ಲ’ ಎಂದರು. ಇದಕ್ಕೆ ಉಪಾಧ್ಯಕ್ಷರು, ‘ಎಲ್ಲಾ ಸದಸ್ಯರು ನಿಮ್ಮ ಅನುಮತಿ ಪಡೆದೇ ಮಾತನಾಡುತ್ತಾರಾ?’ ಎಂದು ತಿರುಗೇಟು ನೀಡಿದರು.

ಅವಕಾಶ ಕೊಡುತ್ತಿಲ್ಲ: ಮಳಿಗೆಗಳ ಹಂಚಿಕೆ ವಿಚಾರವಾಗಿ ಸದಸ್ಯರು ಕಾನೂನಾತ್ಮಕ ಸಾಧಕ ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ಈ ಮಧ್ಯೆ ಸದಸ್ಯೆ ಸಂಗೀತಾ ಅವರು, ‘ಸಭೆಯಲ್ಲಿ ಮಹಿಳಾ ಸದಸ್ಯರಿಗೆ ಮಾತನಾಡಲು ಅವಕಾಶವನ್ನೇ ಕೊಡುತ್ತಿಲ್ಲ. ನೀವು ಜಗಳವಾಡುವುದನ್ನು ನೋಡುವುದಕ್ಕೆ ನಾವು ಸಭೆಗೆ ಬಂದಿದ್ದೇವಾ? ವಾರ್ಡ್‌ನಲ್ಲಿ ಕಸ, ನೀರಿನ ಸಮಸ್ಯೆ ಗಂಭೀರವಾಗಿದೆ. ಆ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ನಜೀರ್ ಅಹಮ್ಮದ್‌, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌, ಆಯುಕ್ತ ಪ್ರಸಾದ್ ಹಾಗೂ ಸದಸ್ಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.