ADVERTISEMENT

ಮಳಿಗೆ ಬಾಡಿಗೆ– ಠೇವಣಿ ಇಳಿಕೆಗೆ ಮನವಿ

ಸಭೆಯಲ್ಲಿ ವ್ಯಾಪಾರಿಗಳ ಒತ್ತಾಯಕ್ಕೆ ಮಣಿಯದ ಜಿಲ್ಲಾಧಿಕಾರಿ ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:44 IST
Last Updated 18 ಜುಲೈ 2019, 19:44 IST
ಶ್ರೀನಿವಾಸಪುರ ಪಟ್ಟಣದಲ್ಲಿನ ಪುರಸಭೆಯ ವಾಣಿಜ್ಯ ಮಳಿಗೆಗಳ ಹರಾಜಿನ ಸಂಬಂಧ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಗುರುವಾರ ಸ್ಥಳೀಯ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದರು.
ಶ್ರೀನಿವಾಸಪುರ ಪಟ್ಟಣದಲ್ಲಿನ ಪುರಸಭೆಯ ವಾಣಿಜ್ಯ ಮಳಿಗೆಗಳ ಹರಾಜಿನ ಸಂಬಂಧ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಗುರುವಾರ ಸ್ಥಳೀಯ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದರು.   

ಕೋಲಾರ: ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಿರ್ಮಿಸಿರುವ ಪುರಸಭೆಯ ವಾಣಿಜ್ಯ ಮಳಿಗೆಗೆಳ ಠೇವಣಿ ಹಾಗೂ ಬಾಡಿಗೆ ಮೊತ್ತ ಕಡಿಮೆ ಮಾಡುವಂತೆ ಮಳಿಗೆಗಳಲ್ಲಿನ ಹಳೆ ವ್ಯಾಪಾರಿಗಳು ಮನವಿ ಮಾಡಿದರು.

ಇಲ್ಲಿ ಗುರುವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹಳೆ ವ್ಯಾಪಾರಿಗಳು, ‘ಪುರಸಭೆಯ ಹಳೆ ವಾಣಿಜ್ಯ ಮಳಿಗೆಗಳನ್ನು ಈ ಹಿಂದೆ ಬಾಡಿಗೆಗೆ ಪಡೆದಿದ್ದೆವು. ಆ ಮಳಿಗೆಗಳನ್ನು ನೆಲಸಮಗೊಳಿಸಿ ಅದೇ ಜಾಗದಲ್ಲಿ ಹೊಸ ಮಳಿಗೆಗಳನ್ನು ನಿರ್ಮಿಸಲಾಗಿದೆ’ ಎಂದು ಹೇಳಿದರು.

‘ಹಳೆ ಮಳಿಗೆ ಖಾಲಿ ಮಾಡಿಸಿದ್ದ ಸಂದರ್ಭದಲ್ಲಿ 46 ಹೊಸ ಮಳಿಗೆಗಳ ಪೈಕಿ 13 ಮಳಿಗೆಗಳನ್ನು ಹಳೆ ವ್ಯಾಪಾರಿಗಳಿಗೆ ಹಂಚಿಕೆ ಮಾಡುವುದಾಗಿ ಅಧಿಕಾರಿಗಳು ಮೌಖಿಕ ಭರವಸೆ ಕೊಟ್ಟಿದ್ದರು. ಅದರಂತೆ ಆ ಮಳಿಗೆಗಳನ್ನು ನಾಲ್ಕು ತಿಂಗಳಿಂದ ನಮಗೆ ಕಾಯ್ದಿರಿಸಲಾಗಿದೆ. ಆದರೆ, ಮಳಿಗೆಗಳ ಠೇವಣಿ ಮತ್ತು ಬಾಡಿಗೆ ಮೊತ್ತ ಹೆಚ್ಚಾಗಿದೆ’ ಎಂದು ಅಳಲು ತೋಡಿಕೊಂಡರು.

ADVERTISEMENT

‘ಪ್ರತಿ ಮಳಿಗೆಗೆ ₹ 4.25 ಲಕ್ಷ ಠೇವಣಿ ಹಾಗೂ ತಿಂಗಳಿಗೆ ₹ 9 ಸಾವಿರ ಬಾಡಿಗೆ ನಿಗದಿಪಡಿಸಿದ್ದು, ಪಾವತಿ ಮಾಡಲು ತೊಂದರೆಯಾಗುತ್ತಿದೆ. ನಾವು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದು, ಹಳೆ ಮಳಿಗೆಗಳನ್ನು ನೆಲಸಮಗೊಳಿಸಿದ ನಂತರ 4 ವರ್ಷಗಳಿಂದ ವಹಿವಾಟು ನಡೆಸಲು ಸಾಧ್ಯವಾಗದೆ ಸುಮ್ಮನಿದ್ದೆವು. ಈಗ ನಮ್ಮ ಬಳಿ ಹಣವಿಲ್ಲ. ಆದ ಕಾರಣ ಠೇವಣಿ ಮತ್ತು ಬಾಡಿಗೆ ಕಡಿಮೆ ಮಾಡಬೇಕು’ ಎಂದು ಕೋರಿದರು.

ಸಹಕರಿಸಬೇಕು: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸರ್ಕಾರದ ನಿಯಮಾವಳಿ ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಮಳಿಗೆ ನಿರ್ಮಿಸಿ ಸಾಕಷ್ಟು ಸಮಯವಾದರೂ ಸಾರ್ವಜನಿಕರ ಉಪಯೋಗಕ್ಕೆ ನೀಡದಿದ್ದರೆ ಹೇಗೆ?’ ಎಂದು ಪ್ರಶ್ನಿಸಿದರು.

‘ನಮ್ಮ ಅಥವಾ ನಿಮ್ಮ ಇಷ್ಟಾನುಸಾರ ಬಾಡಿಗೆ ಮತ್ತು ಠೇವಣಿ ನಿಗದಿ ಮಾಡಿಲ್ಲ. ಸ್ಥಳೀಯ ಸಂಸ್ಥೆಗಳ ಕಾನೂನಿನ ಅನ್ವಯ ನಿಗದಿಪಡಿಸಲಾಗಿದೆ. ವಾಣಿಜ್ಯ ಮಳಿಗೆಗಳ ಬಾಡಿಗೆ ಹಾಗೂ ವಿವಿಧ ತೆರಿಗೆಯಿಂದ ಬರುವ ಹಣದಿಂದಲೇ ಪುರಸಭೆ ಅಧಿಕಾರಿಗಳಿಗೆ ವೇತನ ನೀಡಬೇಕು ಮತ್ತು ಅಭಿವೃದ್ಧಿ ಕೆಲಸ ಮಾಡಬೇಕು. ಈ ಸಂಗತಿ ಅರಿತು ನೀವು ಸಹಕರಿಸಬೇಕು’ ಎಂದರು.

ಆತ್ಮಹತ್ಯೆಯೇ ದಾರಿ: ‘ಸ್ವಾಮಿ, ನೀವು ತಿರುಪತಿ ವೆಂಕಟರಮಣಸ್ವಾಮಿ ಇದ್ದಂತೆ. ನಮ್ಮ ಬೇಡಿಕೆ ಈಡೇರಿಸಬೇಕು. ನಾವು ಮಾಡುವ ವ್ಯಾಪಾರದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಬಾಡಿಗೆ ಮತ್ತು ಠೇವಣಿ ಮೊತ್ತ ಕಡಿಮೆ ಮಾಡದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದೇ ನಮಗೆ ಉಳಿದಿರುವ ದಾರಿ’ ಎಂದು ವ್ಯಾಪಾರಿಯೊಬ್ಬರು ಅಲವತ್ತುಕೊಂಡರು.

ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ‘ಸಾಯುವುದಾಗಿದ್ದರೆ ಇಲ್ಲಿಗೆ ಏಕೆ ಬಂದಿದ್ದೀರಿ? ನೀವು ಆತ್ಮಹತ್ಯೆ ಬೆದರಿಕೆ ಹಾಕಿದರೆ ಹೆದರುವವರು ಯಾರೂ ಇಲ್ಲ. ವಯಸ್ಸಿನಲ್ಲಿ ಹಿರಿಯರಿದ್ದೀರಿ, ನಾಲಿಗೆ ಬಿಗಿ ಹಿಡಿದು ಮಾತನಾಡಿ’ ಎಂದು ಎಚ್ಚರಿಕೆ ನೀಡಿದರು.

‘13 ಹಳೆ ವ್ಯಾಪಾರಿಗಳಿಗೆ ಇಲಾಖೆ ನಿಗದಿಪಡಿಸಿರುವ ₹ 8.50 ಲಕ್ಷ ಠೇವಣಿಯಲ್ಲಿ ಶೇ 50ರಷ್ಟು ಮಾತ್ರ ಅಂದರೆ ₹ 4.25 ಲಕ್ಷ ಪಾವತಿಸಲು ಮಾನವೀಯತೆ ಮೇರೆಗೆ ಅವಕಾಶ ನೀಡಲಾಗಿದೆ. ₹ 9 ಸಾವಿರ ಬಾಡಿಗೆ ಮಾತ್ರ ಎಲ್ಲರಿಗೂ ನಿಗದಿಪಡಿಸಿರುವಂತೆ ಕೂಡಲೇಬೇಕು’ ಎಂದು ವಿವರಿಸಿದರು.

ಆಗ ಕೆಲ ವ್ಯಾಪಾರಿಗಳು, ‘ಪುರಸಭೆಯ ಪಕ್ಕದ ಮತ್ತೊಂದು ವಾಣಿಜ್ಯ ಸಮುಚ್ಚಯದಲ್ಲಿನ ಮಳಿಗೆಯ ಬಾಡಿಗೆ ₹ 2,500 ಇದೆ. ಆ ಸಮುಚ್ಚಯದಲ್ಲಿನ ಮಳಿಗೆಗಳನ್ನೇ ಕೊಡಿ’ ಎಂದು ಕೋರಿದರು.

ವಿಸ್ತಾರ ಕಡಿಮೆ: ‘ಪೂರ್ವಜರ ಕಾಲದಿಂದಲೂ ಮುಸಾಫೀರ್ ವಾಣಿಜ್ಯ ಸಮುಚ್ಚಯದ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಮಳಿಗೆಗೆ ₹ 250 ಮುಂಗಡ ಠೇವಣಿ ಕೊಟ್ಟು ತಿಂಗಳಿಗೆ ₹ 180 ಬಾಡಿಗೆ ಕಟ್ಟುತ್ತಿದ್ದೆ. ಈಗಿನ ಮಳಿಗೆಗಳ ವಿಸ್ತಾರ ಕಡಿಮೆಯಿದೆ. ಈಗ ದಿಢೀರ್‌ ಆಗಿ ಠೇವಣಿ ಮತ್ತು ಬಾಡಿಗೆ ಮೊತ್ತ ಏರಿಸಿರುವುದರಿಂದ ಪಾವತಿಸಲು ನಮಗೆ ಸಾಧ್ಯವಿಲ್ಲ’ ಎಂದು ವ್ಯಾಪಾರಿ ಪಲ್ಲರೆಡ್ಡಿ ಹೇಳಿದರು.

‘ಮಳಿಗೆಯ ಠೇವಣಿ ಹಾಗೂ ಬಾಡಿಗೆಯನ್ನು ನಾವು ನಿಗದಿ ಮಾಡಿಲ್ಲ. ಉಪ ನೋಂದಣಾಧಿಕಾರಿ ಕಚೇರಿಯಿಂದ ಆಯಾ ಪ್ರದೇಶದ ಭೂಮಿಯ ಮೌಲ್ಯದ ಪ್ರಕಾರ ವೈಜ್ಞಾನಿಕವಾಗಿ ದರ ನಿಗದಿಪಡಿಸಲಾಗಿದೆ. ಸರ್ಕಾರದ ಮಾನದಂಡ ಬದಲಿಸುವ ಅಧಿಕಾರ ನನಗಿಲ್ಲ. ನೀವು ಸರ್ಕಾರದ ಮಟ್ಟದಲ್ಲಿ ದರ ನಿಗದಿಪಡಿಸಿಕೊಂಡು ಬಂದರೆ ನಾವು ಸರ್ಕಾರದ ಆದೇಶ ಪಾಲಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಹರಾಜು ಮುಂದೂಡಿ: ‘ಮಳಿಗೆಯ ಠೇವಣಿ ಮತ್ತು ಬಾಡಿಗೆ ಹೆಚ್ಚಿಸಿರುವುದನ್ನು ಸ್ಥಳೀಯ ಶಾಸಕರಾದ ರಮೇಶ್‌ಕುಮಾರ್‌ ಅವರ ಗಮನಕ್ಕೆ ತಂದಿದ್ದೇವೆ. ಆದರೆ, ರಮೇಶ್‌ಕುಮಾರ್‌ ಸದನದ ಕಲಾಪದಲ್ಲಿ ನಿರತರಾಗಿರುವುದರಿಂದ ಅವರಿಗೆ ಬಿಡುವಿಲ್ಲ. ನಮಗೆ ಒಂದು ತಿಂಗಳ ಕಾಲಾವಕಾಶ ನೀಡಿ ಮಳಿಗೆ ಹರಾಜು ಪ್ರಕ್ರಿಯೆ ಮುಂದೂಡಬೇಕು’ ಎಂದು ವ್ಯಾಪಾರಿಗಳು ಮನವಿ ಮಾಡಿದರು.

ಆಗ ಜಿಲ್ಲಾಧಿಕಾರಿ, ‘ಹರಾಜು ಪ್ರಕ್ರಿಯೆ ಮುಂದೂಡಲು ಸಾಧ್ಯವಿಲ್ಲ. ಸರ್ಕಾರ ನಿಗದಿಪಡಿಸಿ ದರ ಪಾವತಿಸಿ. ನಂತರ ಸರ್ಕಾರದ ಮಟ್ಟದಲ್ಲಿ ಬಾಡಿಗೆ ಮತ್ತು ಠೇವಣಿ ಕಡಿಮೆ ಮಾಡಿಸಿಕೊಂಡು ಬಂದರೆ ಹಣ ಮರುಪಾವತಿ ಮಾಡುತ್ತೇವೆ’ ಎಂದು ಭರವಸೆ ನೀಡಿಸಿದರು.

ಅಂಕಿ ಅಂಶ.....
* 46 ಹೊಸ ಮಳಿಗೆಗಳು
* ₹ 4.25 ಲಕ್ಷ ಠೇವಣಿ ಮೊತ್ತ
* ₹ 9 ಸಾವಿರ ತಿಂಗಳ ಬಾಡಿಗೆ
* 13 ಹಳೆ ವ್ಯಾಪಾರಿಗಳಿಗೆ ಮೀಸಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.