ADVERTISEMENT

ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 15:20 IST
Last Updated 3 ಜನವರಿ 2020, 15:20 IST
   

ಕೋಲಾರ: ‘ಧನುರ್ಮಾಸ ಹಾಗೂ ಶೂನ್ಯ ಮಾಸದ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ತಡವಾಗುತ್ತಿದೆ. ಸಂಕ್ರಾಂತಿ ಹಬ್ಬದ ನಂತರ ಖಂಡಿತ ಸಂಪುಟ ವಿಸ್ತರಣೆಯಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವ ಸಂಪುಟ ವಿಸ್ತರಣೆ ತಡವಾಗಿರುವುದರಿಂದ ಶಾಸಕರಿಗೆ ಅಸಮಾಧಾನ ಆಗಿರಬಹುದು. ಬಿಜೆಪಿ ವರಿಷ್ಠರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ವಿಶ್ವಾಸವಿದೆ’ ಎಂದು ತಿಳಿಸಿದರು.

‘ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನ ಕೈಗೊಳ್ಳಲಿದ್ದಾರೆ. ಕೆಲ ಶಾಸಕರು ಅವರ ಬಳಿ ನಿಯೋಗ ಹೋಗಿರುವುದು ಗೊತ್ತಿದೆ. ಬ್ಲಾಕ್‌ಮೇಲ್ ಮಾಡಿರುವುದು ಶಾಸಕರ ವೈಯಕ್ತಿಕ ವಿಚಾರ. ಸಂಪುಟ ವಿಸ್ತರಣೆ ವಿಳಂಬ ಆಗಿರುವುದರಿಂದ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕುವುದರಲ್ಲಿ ತಪ್ಪೇನಿಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಚುನಾವಣೆ ನೀತಿಸಂಹಿತೆ ಮತ್ತಿತರ ಕಾರಣದಿಂದ ಜಿಲ್ಲಾ ಕೇಂದ್ರದಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ವಿಳಂಬವಾಗಿದೆ. 15 ದಿನದೊಳಗೆ ಆಸ್ಪತ್ರೆ ಉದ್ಘಾಟಿಸುತ್ತೇವೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಚರ್ಚಿಸಲಾಗಿದ್ದು, ಸದ್ಯದಲ್ಲೇ ದಿನಾಂಕ ನಿಗದಿಪಡಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಿಂದ ನಿಯೋಗ: ‘ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಣೆಗೆ ಜಿಲ್ಲೆಯಿಂದ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಯನ್ನು ಒಳಗೊಂಡಂತೆ ನಿಯೋಗ ಕರೆದೊಯ್ದು ಪರಿಶೀಲನೆ ಮಾಡಲಾಗುತ್ತದೆ. ಬೇಸಿಗೆ ಸಮೀಪಿಸುತ್ತಿದ್ದು, ನೀರಿನ ವಿಚಾರವಾಗಿ ಸಾಕಷ್ಟು ಎಚ್ಚರ ವಹಿಸಬೇಕಿದೆ. ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿಯುತ್ತಿದ್ದು, ೩ ತಿಂಗಳೊಳಗೆ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ಬರಲಿದೆ’ ಎಂದು ವಿವರಿಸಿದರು.

‘ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ₹ 20,950 ಕೋಟಿ ಆದಾಯ ಸಂಗ್ರಹಣೆ ಗುರಿಯಲ್ಲಿ ಈಗಾಗಲೇ ₹ 1,650 ಕೋಟಿ ಗುರಿ ತಲುಪಿದ್ದೇವೆ. ಮುಂದಿನ 3 ತಿಂಗಳಲ್ಲಿ ನಿಗದಿತ ಗುರಿ ಮುಟ್ಟುತ್ತೇವೆ. ಆನ್‌ಲೈನ್‌ನಲ್ಲಿ ಮದ್ಯದ ವಹಿವಾಟು ನಡೆಸುವ ಕುರಿತು ಮುಂದೆ ಚರ್ಚಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.