ADVERTISEMENT

ಅಸತ್ಯದ ಹಾದಿಯಲ್ಲಿ ಸಮಾಜ: ಉಪನ್ಯಾಸಕ ನಾಗರಾಜ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 13:53 IST
Last Updated 16 ಜುಲೈ 2019, 13:53 IST
ಜಿಲ್ಲಾಡಳಿತವು ಕೋಲಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಅವರು ಅಪ್ಪಣ್ಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಜಿಲ್ಲಾಡಳಿತವು ಕೋಲಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಅವರು ಅಪ್ಪಣ್ಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಕೋಲಾರ: ‘ಸತ್ಯದ ಮೂಲಕ ಸಮಾಜ ನಡೆಯಬೇಕು ಎಂಬುದು ಶಿವಶರಣ ಹಡಪದ ಅಪ್ಪಣ್ಣರ ಆಶಯವಾಗಿತ್ತು. ಆದರೆ, ಪ್ರಸ್ತುತ ಸಮಾಜವು ಅಸತ್ಯದ ಹಾದಿಯಲ್ಲಿ ನಡೆಯುತ್ತಿದೆ’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಜೆ.ಜಿ.ನಾಗರಾಜ್ ವಿಷಾದಿಸಿದರು.

ಜಿಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಪ್ಪಣ್ಣ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮತನಾಡಿ, ‘12ನೇ ಶತಮಾನವು ವಚನಗಳ ಯುಗ. ಸಮ ಸಮಾಜದ ನಡೆಯಲ್ಲಿ ಅಲ್ಲಮಪ್ರಭು, ಬಸವಣ್ಣರ ಜತೆಗೆ ಹಡಪದ ಅಪ್ಪಣ್ಣ ಪ್ರಮುಖ ಪಾತ್ರ ವಹಿಸಿದ್ದರು’ ಎಂದರು.

‘ಹಡಪದ ಅಪ್ಪಣ್ಣ ಕ್ಷೌರದ ಪೆಟ್ಟಿಗೆಯೊಂದಿಗೆ ಊರೂರು, ಮನೆ ಮನೆಗೆ ಹೋಗುತ್ತಿದ್ದರು. ಕ್ಷೌರಿಕ ವೃತ್ತಿಯು ಬಹು ದೊಡ್ಡ ಕಾಯಕ. ಕ್ಷೌರ ಮಾಡದಿದ್ದರೆ ಸಮಾಜ ಹುಚ್ಚರ ಸಂತೆಯಾಗುತ್ತಿತ್ತು. ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಿ ಕ್ಷೌರಿಕ ಸಮುದಾಯಕ್ಕೆ ಗೌರವ ನೀಡುವ ಕೆಲಸ ಆಗಬೇಕು’ ಎಂದು ಹೇಳಿದರು.

ADVERTISEMENT

‘ಅಂಗೈಯಲ್ಲಿ ಲಿಂಗ ಧರಿಸಿ ಶಿವಧ್ಯಾನ ಮಾಡುತ್ತಿರುವ ಅಪ್ಪಣ್ಣರ ಭಾವಚಿತ್ರವು ಏಕಾಗ್ರತೆಯನ್ನು ಸಮಚಿತ್ತದಿಂದ ಸಾಧಿಸಬೇಕೆಂಬ ಸಂದೇಶ ನೀಡುತ್ತದೆ. ಪ್ರತಿಯೊಬ್ಬರೂ ತಮ್ಮ ಕಾಯಕವನ್ನು ಏಕಾಗ್ರತೆ, ಸಮಚಿತ್ತದಿಂದ ಮಾಡಬೇಕು. ನಮ್ಮ ಮನಸ್ಸುಗಳನ್ನು ನಾವೇ ತಿದ್ದಿ ಬದಲಾವಣೆ ಮಾಡಿಕೊಳ್ಳಬೇಕು. ಈ ಉದ್ದೇಶಕ್ಕಾಗಿ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಕ್ರಾಂತಿ ಮಾಡಿದರು: ‘ತುಳಿತಕ್ಕೆ ಒಳಗಾಗಿದ್ದ ಸಮಾಜವನ್ನು ಗೌರವಿಸಲು ಬಸವಣ್ಣನವರು ಬಸವ ಕಲ್ಯಾಣದ ಮಹಾಮನೆಗೆ ಹಡಪದ ಅಪ್ಪಣ್ಣರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದರು. ತನ್ನ ನೋಡುವ ಮುನ್ನ ಅಪ್ಪಣ್ಣರನ್ನು ಮಾತನಾಡಿಸಿ ಬರಬೇಕೆಂದು ಬಸವಣ್ಣ ಹೇಳಿದ್ದು ಇದಕ್ಕೆ ಸಾಕ್ಷಿ. ಬಸವಣ್ಣ ಮೌಢ್ಯ ತೊಡೆದು ಹಾಕಿ ವೈಚಾರಿಕ ಪ್ರಜ್ಞೆ ಮೂಡಿಸಿದರು. ಅಂತರ್ಜಾತಿ ವಿವಾಹದ ಮೂಲಕ ಕಲ್ಯಾಣ ಕ್ರಾಂತಿ ಮಾಡಿದರು’ ಎಂದು ಬಣ್ಣಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಡೋಲು ಬಾರಿಸಿ ಹಡಪದ ಅಪ್ಪಣ್ಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ,ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸಿಂಧೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೈಲೇರಪ್ಪ, ಅಂತರ್ಜಲ ಇಲಾಖೆ ಹಿರಿಯ ವಿಜ್ಞಾನಿ ತಿಪ್ಪೇಸ್ವಾಮಿ, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಎಸ್.ಮಂಜುನಾಥ್, ಗೌರವಾಧ್ಯಕ್ಷ ಎಸ್.ವಿ.ಮುನಿಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.