ADVERTISEMENT

ಆರೋಗ್ಯ ನಿರ್ವಹಣೆಗೆ ಕ್ರೀಡೆ ಅಮೂಲ್ಯ ಸಾಧನ

ಸರ್ಕಾರಿ ನೌಕರರಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 14:43 IST
Last Updated 7 ಜನವರಿ 2020, 14:43 IST
ಕೋಲಾರದಲ್ಲಿ ಮಂಗಳವಾರ ಆರಂಭವಾದ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಹಾಗೂ ಗಣ್ಯರು ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು.
ಕೋಲಾರದಲ್ಲಿ ಮಂಗಳವಾರ ಆರಂಭವಾದ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಹಾಗೂ ಗಣ್ಯರು ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು.   

ಕೋಲಾರ: ‘ಸದಾ ಜನರ ಸೇವೆಯಲ್ಲಿರುವ ಸರ್ಕಾರಿ ನೌಕರರು ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಕ್ರೀಡೆಯು ಮನಸ್ಸಿನ ನೋವು, ಬೇಸರ ಮರೆಸಿ ಕರ್ತವ್ಯ ನಿರ್ವಹಣೆಗೆ ಆತ್ಮಸ್ಥೈರ್ಯ ತುಂಬುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕ್ರೀಡೆಯಲ್ಲಿ ಸೋಲು -ಗೆಲುವು ಮುಖ್ಯವಲ್ಲ, ಪಾಲ್ಗೊಳ್ಳುವಿಕೆ ಮುಖ್ಯ. ಆರೋಗ್ಯ ನಿರ್ವಹಣೆಗೆ ಕ್ರೀಡೆ ಅಮೂಲ್ಯ ಸಾಧನ. ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ನೌಕರ ವರ್ಗದಲ್ಲಿ ಸಮನ್ವಯ ಕಾಪಾಡುವಲ್ಲೂ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಜಿಲ್ಲಾ ಮಟ್ಟದಲ್ಲಿ ಗೆದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಜಿಲ್ಲೆಯನ್ನು ಪ್ರತಿನಿಧಿಸಿ ಉತ್ತಮ ಸಾಧನೆ ಮಾಡಿ’ ಎಂದು ಆಶಿಸಿದರು.

ADVERTISEMENT

‘ಸರ್ಕಾರಿ ನೌಕರರು ಕರ್ತವ್ಯದ ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ಕಾರ್ಯದೊತ್ತಡದಿಂದ ನೌಕರರಿಗೆ ರಕ್ತದೊತ್ತಡ, ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೌಕರರು ಆರೋಗ್ಯ ಸಮಸ್ಯೆಯಿಂದ ದೂರಾಗಲು ಕ್ರೀಡೆಗಳಲ್ಲಿ ಭಾಗವಹಿಸಬೇಕು. ದೈಹಿಕ ಆರೋಗ್ಯಕ್ಕೆ ವ್ಯಾಯಾಮ ಸಹಕಾರಿ’ ಎಂದು ಕಿವಿಮಾತು ಹೇಳಿದರು.

‘ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಹೊಣೆ ಹೊತ್ತಿರುವ ನೌಕರರು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಹಕಾರ ನೀಡಬೇಕು. ಹಿಂದುಳಿದ ಜಿಲ್ಲೆಯ ಅಭಿವೃದ್ದಿಗೆ ಸ್ಪಂದಿಸಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

‘ಕಂದಾಯ ಇಲಾಖೆ ಅಧಿಕಾರಿಗಳು ನಕಲಿ ದಾಖಲೆಪತ್ರ ಸೃಷ್ಟಿಸಿ ಸರ್ಕಾರಿ ಜಾಗವನ್ನು ರಿಯಲ್‍ ಎಸ್ಟೇಟ್ ಉದ್ದಿಮೆದಾರರಿಗೆ ಅಕ್ರಮವಾಗಿ ಪರಭಾರೆ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಕಂದಾಯ ಇಲಾಖೆ ಸಿಬ್ಬಂದಿಯ ಈ ಧೋರಣೆ ಬದಲಾಗಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಿಎಎ ಜಾಗೃತಿ ಮೂಡಿಸಿ: ‘ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಸರ್ಕಾರದ ಭಾಗವಾಗಿರುವ ನೌಕರರು ಸಿಎಎ ಕಾಯ್ದೆ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು. ಪ್ರಧಾನಿ ಮೋದಿಯವರು ದೂರದೃಷ್ಟಿಯಿಂದ ರೂಪಿಸಿರುವ ಈ ಕಾಯ್ದೆಯಿಂದ ಯಾರಿಗೂ ತೊಂದರೆ ಆಗುವುದಿಲ್ಲವೆಂಬ ಸತ್ಯವನ್ನು ಜನರಿಗೆ ತಿಳಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ನೌಕರರಿಗೆ ಸಭಾ ಭವನ ಇಲ್ಲದಿರುವುದರು ಸರಿಯಲ್ಲ. ಸಭಾ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ ಕಟ್ಟಡಕ್ಕೆ ಶಂಕುಸ್ಥಾಪನೆ ನಡೆಸಿದ ನಂತರವಷ್ಟೇ ಮುಂದಿನ ವರ್ಷದ ಕ್ರೀಡಾಕೂಟಕ್ಕೆ ಬರುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್‌ ಶೋಭಿತಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಅಶೋಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.