ADVERTISEMENT

ಎಸ್ಸೆಸ್ಸೆಲ್ಸಿ: ಸಾಧಕ ವಿದ್ಯಾರ್ಥಿನಿಯರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಮೇ 2022, 13:10 IST
Last Updated 19 ಮೇ 2022, 13:10 IST
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 100ರ ಸಾಧನೆ ಮೂಲಕ ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿರುವ ಕೋಲಾರದ ಚಿನ್ಮಯ ಶಾಲೆ ವಿದ್ಯಾರ್ಥಿನಿಯರಾದ ತೇಜಸ್ವಿನಿ ಚೌವಾಣ್‌ ಮತ್ತು ಎ.ಕಾರ್ಣಿಕಾ ಶಾಲೆಯಲ್ಲಿ ‌ಗುರುವಾರ ಶಿಕ್ಷಕರೊಂದಿಗೆ ಸಂಭ್ರಮಿಸಿದರು
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 100ರ ಸಾಧನೆ ಮೂಲಕ ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿರುವ ಕೋಲಾರದ ಚಿನ್ಮಯ ಶಾಲೆ ವಿದ್ಯಾರ್ಥಿನಿಯರಾದ ತೇಜಸ್ವಿನಿ ಚೌವಾಣ್‌ ಮತ್ತು ಎ.ಕಾರ್ಣಿಕಾ ಶಾಲೆಯಲ್ಲಿ ‌ಗುರುವಾರ ಶಿಕ್ಷಕರೊಂದಿಗೆ ಸಂಭ್ರಮಿಸಿದರು   

ಕೋಲಾರ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 100ರ ಸಾಧನೆ ಮೂಲಕ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿರುವ ಜಿಲ್ಲೆಯ ಐದು ವಿದ್ಯಾರ್ಥಿಗಳ ಕುಟುಂಬದಲ್ಲಿ ಹಾಗೂ ಅವರು ಓದಿದ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿದೆ.

625ಕ್ಕೆ 625 ಅಂಕ ಗಳಿಸುವ ಮೂಲಕ ಸಾಧನೆ ಮಾಡಿರುವ ಎಲ್ಲಾ ಐದು ಸಾಧಕರು ಬಾಲಕಿಯರೇ ಎಂಬುದು ವಿಶೇಷ. ಚಿನ್ಮಯ ಶಾಲೆಯ ವಿದ್ಯಾರ್ಥಿನಿ ಎ.ಕಾರ್ಣಿಕಾ ಈ ಸಾಧಕರಲ್ಲಿ ಒಬ್ಬರಾಗಿದ್ದು, ಇವರು ನಗರದ ಅಂಜನೇಯರೆಡ್ಡಿ ಹಾಗೂ ನಂದನ ದಂಪತಿಯ ಪುತ್ರಿ. ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳಬೇಕೆಂದು ಕಾರ್ಣಿಕಾ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿನಿ ತೇಜಸ್ವಿನಿ ಚೌವಾಣ್‌ ಮೂಲತಃ ವಿಜಾಪುರದವರು. ಇವರ ತಂದೆ ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿ ಗ್ರಾ.ಪಂ ಪಿಡಿಒ ಗೇಮು ಚೌಹಾಣ್ ಹಾಗೂ ತಾಯಿ ಮಂಜುಳಾ ಚೌಹಾಣ್ ಆಗಿದ್ದಾರೆ. ಮತ್ತೊಬ್ಬ ಸಾಧಕಿಯಾದ ಕೋಲಾರ ಸೈನಿಕ್ ಪಬ್ಲಿಕ್ ಶಾಲೆಯ ಶ್ರೀಲಕ್ಷ್ಮೀ ಅವರು ನಗರದ ಮೋಹನ್‍ಕುಮಾರ್ ಹಾಗೂ ಸತ್ಯವತಿ ದಂಪತಿಯ ಮಗಳು.

ADVERTISEMENT

ಸಾಧಕ ವಿದ್ಯಾರ್ಥಿನಿಯರಾದ ಎ.ಕಾರ್ಣಿಕಾ ಮತ್ತು ತೇಜಸ್ವಿನಿ ಚೌಹಾಣ್, ಗುರುವಾರ ಫಲಿತಾಂಶ ಪ್ರಕಟವಾದ ಬಳಿಕ ಪೋಷಕರೊಂದಿಗೆ ಶಾಲೆಗೆ ಬಂದಿ ಶಿಕ್ಷಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಮುಳಬಾಗಿಲಿನ ಅಮರಜ್ಯೋತಿ ಶಾಲೆಯ ಪ್ರಿಯಾಂಕ ಮುಳಬಾಗಿಲು ಪಟ್ಟಣದ ಬ್ಯಾಂಕ್ ಉದ್ಯೋಗಿ ಕುಪ್ಪರಾಜು ಹಾಗೂ ದಿವ್ಯಾ ದಂಪತಿಯ ಪುತ್ರಿಯಾಗಿದ್ದು, ಈಕೆ ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ.

ಕೆಜಿಎಫ್‍ನ ಬೆಮಲ್ ಶಾಲೆಯ ಅಮೂಲ್ಯ ಅವರು ಬೆಮಲ್ ನೌಕರರಾದ ಎಂ.ಎಸ್.ಶಶಿಕುಮಾರ್ ಮತ್ತು ಎಸ್.ಲಾವಣ್ಯ ದಂಪತಿಯ ಮಗಳು. ಈ ಐವರು ಸಾಧಕಿಯರನ್ನು ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.