ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಕೋಲಾರಕ್ಕೆ 2ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 24 ಮೇ 2022, 15:00 IST
Last Updated 24 ಮೇ 2022, 15:00 IST

ಕೋಲಾರ: ‘ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೋಲಾರ ತಾಲ್ಲೂಕಿಗೆ ಶೇ 95.8 ಫಲಿತಾಂಶ ಬಂದಿದ್ದು, ತಾಲ್ಲೂಕು ಜಿಲ್ಲೆಯಲ್ಲಿ 2ನೇ ಸ್ಥಾನ ಗಳಿಸಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರಿ ಶಾಲೆಗಳಿಗೆ ಶೇ 93.4, ಅನುದಾನಿತ ಶಾಲೆಗಳಿಗೆ ಶೇ 96.05 ಹಾಗೂ ಅನುದಾನಿತ ಶಾಲೆಗಳಿಗೆ ಶೇ 97.31 ಫಲಿತಾಂಶ ಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 96.80 ಬಾಲಕಿಯರು ಹಾಗೂ ಶೇ 94.89ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ’ ಎಂದು ಹೇಳಿದರು.

‘ವಿಷಯವಾರು ಫಲಿತಾಂಶದಲ್ಲಿ ಸಮಾಜ ವಿಜ್ಞಾನಕ್ಕೆ ಶೇ 99.61 ಫಲಿತಾಂಶ ಬಂದಿದೆ. ಉಳಿದಂತೆ ಪ್ರಥಮ ಭಾಷೆಯಲ್ಲಿ ಶೇ 97.41, ದ್ವಿತೀಯ ಭಾಷೆಯಲ್ಲಿ ಶೇ 98.31, ತೃತೀಯ ಭಾಷೆಯಲ್ಲಿ ಶೇ 99.27, ಗಣಿತದಲ್ಲಿ ಶೇ 99.47 ಹಾಗೂ ವಿಜ್ಞಾನದಲ್ಲಿ ಶೇ 99.65ರಷ್ಟು ಫಲಿತಾಂಶ ಬಂದಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ತಾಲ್ಲೂಕಿನ ಒಟ್ಟು 50 ಶಾಲೆಗಳು ಶೇ 100ರ ಫಲಿತಾಂಶದ ಸಾಧನೆ ಮಾಡಿವೆ. ಈ ಪೈಕಿ 12 ಸರ್ಕಾರಿ ಶಾಲೆಗಳು, 4 ಅನುದಾನಿತ ಶಾಲೆಗಳು ಹಾಗೂ 34 ಖಾಸಗಿ ಶಾಲೆಗಳು ಸೇರಿವೆ. ಚಿನ್ಮಯ ಶಾಲೆಯ ವಿದ್ಯಾರ್ಥಿನಿಯರಾದ ಕರ್ಣಿಕಾ ಮತ್ತು ತೇಜಸ್ವಿನಿ ಚೌಹಾಣ್, ಸೈನಿಕ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಶ್ರೀಲಕ್ಷ್ಮಿ 625ಕ್ಕೆ 625 ಅಂಕ ಗಳಿಸಿ ಸಾಧಕರಾಗಿ ಹೊರಹೊಮ್ಮಿದ್ದಾರೆ’ ಎಂದು ವಿವರಿಸಿದರು.

‘3 ವಿದ್ಯಾರ್ಥಿಗಳು 624 ಅಂಕ, 8 ವಿದ್ಯಾರ್ಥಿಗಳು 623 ಅಂಕ, 4 ವಿದ್ಯಾರ್ಥಿಗಳು 622 ಅಂಕ, 6 ಮಂದಿ 621 ಹಾಗೂ 7 ಮಂದಿ 620 ಅಂಕ ಗಳಿಸಿದ್ದಾರೆ. ಉತ್ತಮ ಫಲಿತಾಂಶ ಗಳಿಕೆಗೆ ವಿದ್ಯಾರ್ಥಿಗಳು, ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಶ್ರಮ ಕಾರಣ’ ಎಂದು ಧನ್ಯವಾದ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.