ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ ಸ್ಥಾನಕ್ಕೇರಲಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 12:47 IST
Last Updated 17 ಏಪ್ರಿಲ್ 2021, 12:47 IST

ಕೋಲಾರ: ‘ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಧನೆಯಲ್ಲಿ ಈ ಬಾರಿ ಪ್ರಥಮ ಸ್ಥಾನಕ್ಕೆ ಏರಬೇಕು’ ಎಂದು ಜಿಲ್ಲಾ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಡಯಟ್‌) ಪ್ರಾಂಶುಪಾಲ ಎಸ್.ಜಿ.ನಾಗೇಶ್ ಆಶಿಸಿದರು.

ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಶನಿವಾರ ನಡೆದ ಸಂವಾದದಲ್ಲಿ ಮಾತನಾಡಿ, ‘ಶ್ರದ್ಧೆ, ಏಕಾಗ್ರತೆಯೊಂದಿಗೆ ಓದಿ ಪೋಷಕರ ಆಶಯಗಳಿಗೆ ಜೀವ ನೀಡಿ. ಗುಣಾತ್ಮಕ ಫಲಿತಾಂಶದೊಂದಿಗೆ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಛಲದಿಂದ ಮುನ್ನಡೆಯಿರಿ’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯು ಹಿಂದಿನ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿ 5ನೇ ಸ್ಥಾನ ಮತ್ತು ಗುಣಾತ್ಮಕತೆಯಲ್ಲಿ 2ನೇ ಸ್ಥಾನ ಗಳಿಸಿತು. ಈ ಬಾರಿ ಇದು ಪ್ರಥಮ ಸ್ಥಾನವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಂತೆ ಪರೀಕ್ಷೆಗೆ ಸಿದ್ಧತೆ ನಡೆಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಈ ಬಾರಿ ಪರೀಕ್ಷೆಗೆ ಶೇ 30ರಷ್ಟು ಪಠ್ಯ ಕಡಿತಗೊಂಡಿದೆ. ಇರುವ ಸಮಯದಲ್ಲಿ ಚೆನ್ನಾಗಿ ಓದಿ. ಬೇಸಿಗೆ ಆರಂಭವಾಗಿದ್ದು, ಹೆಚ್ಚು ನೀರು ಕುಡಿಯಿರಿ. ಆರೋಗ್ಯ ರಕ್ಷಣೆಗೆ ಒತ್ತು ನೀಡಿ. ಕಲಿಕಾ ವಿಧಾನ, ಗುರಿ, ಸಮಯಪಾಲನೆ ಅಂಶಗಳ ಬಗ್ಗೆ ಶ್ರದ್ಧೆ ಹೆಚ್ಚಿಸಿಕೊಳ್ಳಿ. ಇಲಾಖೆ ನೀಡಿರುವ ಮಾದರಿ ಪ್ರಶ್ನೆಪತ್ರಿಕೆ ಅಭ್ಯಾಸ ಮಾಡಿ. ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಕೋಠಿಯ ಸದುಪಯೋಗ ಪಡೆಯಿರಿ’ ಎಂದರು.

ಆತ್ಮಸ್ಥೈರ್ಯ ತುಂಬಿ

‘ಮಕ್ಕಳಿಗೆ ಯೋಗ್ಯತಾ ಪತ್ರ ನೀಡುವುದಕ್ಕಿಂತ ಅವರನ್ನು ಯೋಗ್ಯರಾಗಿಸಿ. ಶಿಕ್ಷಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಣಿಗೊಳಿಸಬೇಕು. ಪರೀಕ್ಷೆ ಸಮೀಪಿಸುತ್ತಿದ್ದು, ಇನ್ನುಳಿದ ದಿನಗಳಲ್ಲಿ ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಿ ಉತ್ತಮ ಅಂಕ ಪಡೆಯಲು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಿ’ ಎಂದು ತಿಳಿಸಿದರು.

ಡಯಟ್‌ ಹಿರಿಯ ಉಪನ್ಯಾಸಕಿಯರಾದ ಚಂದ್ರಕಲಾ, ಪಂಕಜಾ, ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್‌, ಶಿಕ್ಷಕರಾದ ಶ್ರೀನಿವಾಸ್, ಶೀಲಕುಮಾರಿ, ರಾಮಲಿಂಗಪ್ಪ, ಶಿವಪ್ಪ, ರಾಮಾಂಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.