ಮುಳಬಾಗಿಲು: ಜಮೀನೊಂದರ ಪೋಡಿ ದಾಖಲೆ ನೀಡಲು ತಾಲ್ಲೂಕು ಕಚೇರಿಯಲ್ಲಿ ಬುಧವಾರ ₹1.50 ಲಕ್ಷ ಪಡೆಯುತ್ತಿದ್ದ ಎಡಿಎಲ್‌ಆರ್ ನಿವೇದಿತಾ ಎಂಬುವರು ಲೋಕಾಯುಕ್ತ ಪೊಲೀಸರನ್ನು ಕಂಡು ಕಚೇರಿಯಿಂದ ಓಡಿ ಹೋಗಿದ್ದಾರೆ.
ಓಡಿ ಹೋಗುತ್ತಿದ್ದ ನಿವೇದಿತಾ ಅವರನ್ನು ಲೋಕಾಯುಕ್ತ ಪೊಲೀಸರು ಹಿಡಿದು ಕರೆ ತಂದು ಕಚೇರಿಯಲ್ಲಿ ವಿಚಾರಣೆ ನಡೆಸಿದಾಗ ₹1.50 ಲಕ್ಷ ಪಡೆಯುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಜಮೀನೊಂದರ ಪೋಡಿ ದಾಖಲೆ ನೀಡಲು ನಿವೇದಿತಾ ₹2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹೊಸಕೋಟೆ ತಾಲ್ಲೂಕಿನ ನಾಗಸಂದ್ರ ಗ್ರಾಮದ ಮಂಜುನಾಥ್ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಗ್ರಾಮದ ಬಳಿ ಜಮೀನು ಖರೀದಿಸಿದ್ದ ಮಂಜುನಾಥ್ ಅದರ ದಾಖಲೆ ಪಡೆಯಲು ಕೋಲಾರದ ಡಿಡಿಎಲ್‌ಆರ್ ಸಂಜಯ್ ಅವರಿಗೆ ಮನವಿ ಮಾಡಿದ್ದರು.
ಈ ಬಗ್ಗೆ ಕಚೇರಿಯ ಸಿಬ್ಬಂದಿ ಸಂದೀಪ್ ಮೂಲಕ ಮಾಹಿತಿ ಪಡೆದ ಎಡಿಎಲ್‌ಆರ್ ನಿವೇದಿತಾ, ಮುಳಬಾಗಿಲಿನ ಸರ್ವೇಯರ್ ಸಂತೋಷ್ ಮೂಲಕ ₹2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಬೆಂಗಳೂರಿನ ಹೋಟೆಲ್‌ನಲ್ಲಿ ಮಂಜುನಾಥ್ ಅವರು ನಿವೇದಿತಾ ಅವರಿಗೆ ₹50 ಸಾವಿರ ಮುಂಗಡವಾಗಿ ನೀಡಿದ್ದರು. ಬಾಕಿ ₹1.50 ಲಕ್ಷ ನೀಡಲು ಮಂಜುನಾಥ್ ಸಮಯಾವಕಾಶ ಕೋರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ಲೋಕಾಯುಕ್ತ ಪೊಲೀಸರು ಬುಧವಾರ ತಾಲ್ಲೂಕು ಕಚೇರಿ ಮೇಲೆ ದಾಳಿ ನಡೆಸಿದಾಗ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಹೋಗಿದ್ದಾರೆ. ಕೆಲವು ಅಧಿಕಾರಿಗಳ ಮೊಬೈಲ್ ಬಂದ್ ಆಗಿದ್ದವು. ಅಂತಹವರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ’ ಎಂದು ಲೋಕಾಯುಕ್ತ ಇನ್‌ಸ್ಪೆಕ್ಟರ್ ರೇಣುಕಾ ತಿಳಿಸಿದ್ದಾರೆ.
ಡಿಡಿಎಲ್‌ಆರ್ ಸಂಜಯ್, ಎಡಿಎಲ್‌ಆರ್ ನಿವೇದಿತಾ, ಸರ್ವೇಯರ್ ಸಂತೋಷ್ ಹಾಗೂ ಸಂದೀಪ್ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.