ADVERTISEMENT

ಕೋಲಾರ: ವಿದ್ಯಾರ್ಥಿಗಳಿಗೆ ಚಪ್ಪಡಿ ಕಲ್ಲು ಒಡೆಯುವ ಕೆಲಸ!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 23:29 IST
Last Updated 19 ಮಾರ್ಚ್ 2024, 23:29 IST
   

ಕೋಲಾರ: ನಗರದ ಸರ್ಕಾರಿ ಜೂನಿಯರ್‌ ಕಾಲೇಜಿನಲ್ಲಿ ನೀರಿನ ಪೈಪು ಅಳವಡಿಸಲು ಕಲ್ಲು ಒಡೆಯುವ, ಚಪ್ಪಡಿ ಕಲ್ಲು ಎತ್ತುವ ಹಾಗೂ ಮಣ್ಣು ಹೊರುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವುದು ಗೊತ್ತಾಗಿದೆ.

ಶುಕ್ರವಾರ (ಮಾರ್ಚ್‌15) ಮಧ್ಯಾಹ್ನ 8, 9 ಹಾಗೂ 10ನೇ ತರಗತಿಯ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಈ ಕೆಲಸ ಮಾಡಿಸಿಕೊಂಡಿರುವುದು ತಿಳಿದುಬಂದಿದೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಉಪನಿರ್ದೇಶಕರ ಕಚೇರಿ ಪಕ್ಕವೇ ಈ ಪ್ರೌಢಶಾಲೆ ಇದೆ.

ಮಕ್ಕಳು ಕೆಲಸ ಮಾಡುವ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಅವರು ವಿಡಿಯೊ ಹಾಗೂ ಫೋಟೊ ಹಂಚಿಕೊಂಡಿದ್ದಾರೆ.

ADVERTISEMENT

ಪ್ರೌಢಶಾಲೆ ವಿಭಾಗದ ಉಪಪ್ರಾಂಶುಪಾಲೆ ರಾಧಮ್ಮ, ಶಿಕ್ಷಕರು ಹಾಗೂ ಸಿಬ್ಬಂದಿಯು ಮಕ್ಕಳನ್ನು ಈ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘ಇಂಥ ಕೆಲಸಗಳಿಗೆ ಮಕ್ಕಳನ್ನು ಬಳಸಿ ಕೊಂಡಿರುವುದು ಮೊದಲ ತಪ್ಪು. ಅಲ್ಲದೇ, ಇದೇ 25ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆಗೆ ಸಿದ್ಧರಾಗಬೇಕಿದ್ದ ವಿದ್ಯಾರ್ಥಿಗಳಿಂದ ಮೂರು ದಿನ ಕೆಲಸ ಮಾಡಿಸಿದ್ದಾರೆ’ ಎಂದು ಅವರು ದೂರಿದ್ದಾರೆ.

ನೋಟಿಸ್‌ ಕೊಡಲಾಗಿದೆ: ಡಿಡಿಪಿಐ ಕೃಷ್ಣಮೂರ್ತಿ
ಫೋಟೊ, ವಿಡಿಯೊ ಗಮನಿಸಿದರೆ ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದಂತಿದೆ. ಉಪಪ್ರಾಂಶುಪಾಲೆ ರಾಧಮ್ಮ ಅವರೊಂದಿಗೆ ಮಾತನಾಡಿ ವಿವರಣೆ ಪಡೆದಿದ್ದೇನೆ. ಎಸ್ಸೆಸ್ಸೆಲ್ಸಿ ಅಲ್ಲ; 9ನೇ ತರಗತಿ ವಿದ್ಯಾರ್ಥಿಗಳ ಕೈಯಲ್ಲಿ ತೋಟಗಾರಿಕೆ ಕೆಲಸ ಮಾಡಿಸಿದ್ದಾಗಿ ವಿವರಣೆ ನೀಡಿದ್ದಾರೆ. ಯಾವುದೇ ವಿದ್ಯಾರ್ಥಿಗಳಿಂದ ಇಂಥ ಯಾವುದೇ ಕೆಲಸ ಮಾಡಿಸುವುದು ತಪ್ಪು. ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ನೋಟಿಸ್‌ ಕೊಟ್ಟಿದ್ದಾರೆ. ಬುಧವಾರ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.