ADVERTISEMENT

ಶ್ರೀನಿವಾಸಪುರ | ಅರಣ್ಯ ಇಲಾಖೆಯ ಜೆಸಿಬಿಗಳ ಮೇಲೆ ರೈತರಿಂದ ಕಲ್ಲುತೂರಾಟ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 14:08 IST
Last Updated 9 ಸೆಪ್ಟೆಂಬರ್ 2023, 14:08 IST
   

ಶ್ರೀನಿವಾಸಪುರ (ಕೋಲಾರ): ತಾಲ್ಲೂಕಿನ ನಾರಮಾಕನಹಳ್ಳಿಯಲ್ಲಿ ಒತ್ತುವರಿ ತೆರವುಗೊಳಿಸಲು ಮುಂದಾದ ಅರಣ್ಯ ಇಲಾಖೆಯ ಜೆಸಿಬಿಗಳ ಮೇಲೆ ರೊಚ್ಚಿಗೆದ್ದ ರೈತರು ಶನಿವಾರ ದಾಳಿ ನಡೆಸಿದ್ದಾರೆ.

ಐದು ಜೆಸಿಬಿಗಳ ಮೇಲೆ ಕಲ್ಲು ತೂರಿದ್ದು, ದೊಣ್ಣೆಗಳಿಂದ ಗಾಜು ಒಡೆದು ಹಾಕಿದ್ದಾರೆ. ಇದರಿಂದ ಭಯಗೊಂಡ ಆಪರೇಟರ್‌ಗಳು ಜೆಸಿಬಿ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

‘ರೈತರ ಭೂಮಿಯನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಮುಂದಾದರೆ, ಬೆಳೆ ನಾಶಪಡಿಸಲು ಪ್ರಯತ್ನಿಸಿದರೆ ಜೆಸಿಬಿಗಳನ್ನು ಬಿಡಬಾರದು’ ಎಂಬ ಸಂಸದ ಎಸ್‌.ಮುನಿಸ್ವಾಮಿ ಅವರ ಹೇಳಿಕೆಯಿಂದ ರೈತರು ಪ್ರಚೋದಿತರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ADVERTISEMENT

ಶನಿವಾರ ಮಧ್ಯಾಹ್ನ 1 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಮುನಿಸ್ವಾಮಿ, ರೈತರನ್ನು ಉದ್ದೇಶಿಸಿ, ‘ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಸಿದ್ದರಾಮಯ್ಯ, ನಾನು ಸೇರಿದಂತೆ ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಬದುಕಿರುವವರೆಗೆ ನ್ಯಾಯಕ್ಕಾಗಿ ಹೋರಾಟ ಮಾಡಬೇಕು. ‌ಜೆಸಿಬಿಗಳು ಬಂದರೆ ಬಿಡಬೇಡಿ. ಒಗ್ಗಟ್ಟಾಗಿ ಹೋರಾಟ ಮಾಡಿ, ನಾವು ಜೊತೆಗಿರುತ್ತೇವೆ’ ಎಂದರು. ಆಗ ಜೊತೆಗಿದ್ದ ಕೆಲವರು ‘ಬೆಂಕಿ ಹಚ್ಚಬೇಕು’ ಎಂದು ಕೂಗಿದರು.

‘ಪೊಲೀಸರೇ ನೀವು ಅರಣ್ಯ ಇಲಾಖೆಗೆ ರಕ್ಷಣೆ ನೀಡುತ್ತಿದ್ದೀರಿ. ನೀವು ರೈತರಲ್ಲವೇ? ನೀವು ಏನು ತಿನ್ನುತ್ತೀರಿ, ಅನ್ನ ತಿನ್ನುವುದಿಲ್ಲವೇ? ನಮಗೇನೂ ರೋಷ ಇಲ್ಲವೇ? ಶ್ರೀನಿವಾಸಪುರ ಹೊತ್ತಿಕೊಂಡು ಉರಿಯುತ್ತಿದೆ. ಬೆಳೆ ನಾಶಮಾಡುತ್ತಿರುವವರ ವಿರುದ್ಧ ಹೋರಾಟ ಮಾಡಬೇಕು. ಡಿಎಫ್‌ಒ ಹಗಲು ಕುಡುಕ’ ಎಂದು ಸಂಸದ ಹೇಳಿದರು.

‘ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮಾವಿನ ಬೆಳೆ ನಾಶ ಮಾಡಿದ್ದಾರೆ. ಅರಣ್ಯ ಇಲಾಖೆಯದ್ದೇ ಜಮೀನು ಆಗಿದ್ದರೆ ಹಿಂದೆ ಏಕೆ ರೈತರಿಗೆ ದಾಖಲೆ ಪತ್ರ ನೀಡಿದ್ದೀರಿ? ಆಗ ಏನು ಮಣ್ಣು ತಿನ್ನುತ್ತಿದ್ದರಾ’ ಎಂದು ಪ್ರಶ್ನಿಸಿದರು.

ತಾಲ್ಲೂಕಿನಲ್ಲಿ ಸುಮಾರು 3 ಸಾವಿರ ಎಕರೆಯಷ್ಟು ಅರಣ್ಯ ಪ್ರದೇಶ ಒತ್ತುವರಿ ಆಗಿರುವ ಬಗ್ಗೆ ದೂರುಗಳಿದ್ದು, ಅರಣ್ಯ ಇಲಾಖೆಯು 15 ದಿನಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದೆ. ಈಗಾಗಲೇ ಸುಮಾರು 600 ಎಕರೆ ತೆರವುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.