ADVERTISEMENT

29ಕ್ಕೆ ಎಸ್ಪಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 14:47 IST
Last Updated 22 ಫೆಬ್ರುವರಿ 2020, 14:47 IST

ಕೋಲಾರ: ‘ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಜೂಜಾಟ ಹಾಗೂ ಫಿಲ್ಟರ್‌ ಮರಳು ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಫೆ.29ರಂದು ಮುತ್ತಿಗೆ ಹಾಕುತ್ತೇವೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ಎಚ್ಚರಿಕೆ ನೀಡಿದರು.

ಇಲ್ಲಿ ಶನಿವಾರ ನಡೆದ ಸಂಘಟನೆ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯ ಮಾಲೂರು ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಕಲ್ಲು ಗಣಿಗಾರಿಕೆ ಮತ್ತು ಮರಳು ದಂಧೆ ರಾಜರೋಷವಾಗಿ ನಡೆಯುತ್ತಿದೆ. ಈ ಅಕ್ರಮ ತಡೆಯಬೇಕಾದ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ’ ಎಂದು ದೂರಿದರು.

‘ತಮಿಳುನಾಡಿನಿಂದ ಪ್ರತಿನಿತ್ಯ ಮರಳು ಸಾಗಣೆ ಲಾರಿಗಳು ಮಾಲೂರು ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿವೆ. ಮಾಲೂರು ಭಾಗದ ಪೊಲೀಸರು ಲಾರಿ ಮಾಲೀಕರಿಂದ ಲಂಚ ಪಡೆದು ಅಕ್ರಮ ಮರಳು ಸಾಗಣೆಗೆ ಅವಕಾಶ ಕಲ್ಪಿಸಿದ್ದಾರೆ. ಮಾಲೂರು ತಾಲ್ಲೂಕಿನ ಮಾಸ್ತಿ, ಲಕ್ಕೂರು ಮತ್ತು ಕೋಲಾರ ತಾಲ್ಲೂಕಿನ ಕೆರೆ ಕುಂಟೆಗಳಲ್ಲಿ ಅಕ್ರಮ ಫಿಲ್ಟರ್ ದಂಧೆ ನಡೆಯುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಮರಳು ದಾಸ್ತಾನು ಮಾಡಿ ಲಾರಿಗಳಿಗೆ ತುಂಬಿಸಿ ರಾತ್ರಿ ವೇಳೆ ಕದ್ದುಮುಚ್ಚಿ ಹೊರಗೆ ಸಾಗಿಸಲಾಗುತ್ತಿದೆ. ದಿನಕ್ಕೆ ಸುಮಾರು 40 ಲಾರಿಗಳಲ್ಲಿ ಬೆಂಗಳೂರಿಗೆ ಮರಳು ಕಳುಹಿಸಲಾಗುತ್ತಿದೆ. ಪೊಲೀಸರಿಗೆ ಈ ಅಕ್ರಮ ಗೊತ್ತಿದ್ದರೂ ಹಣದಾಸೆಗೆ ಮೌನವಾಗಿದ್ದಾರೆ’ ಎಂದು ಕಿಡಿಕಾರಿದರು.

ಜೂಜಾಟ: ‘ಜಿಲ್ಲೆಯ ಗಡಿ ಭಾಗದ  ರಾಯಲ್ಪಾಡು, ಮಾಸ್ತಿ, ಲಕ್ಕೂರು, ನಾಯಕರಹಳ್ಳಿ. ಮದನಹಳ್ಳಿ ಕ್ರಾಸ್‌ನ ಅರಣ್ಯ ತೋಪುಗಳಲ್ಲಿ ಜೂಜಾಟ ನಡೆಯುತ್ತಿದೆ. ಜೂಜುಕೋರರಿಗೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆ. ಜೂಜಾಟಕ್ಕೆ ಲಕ್ಷಾಂತರ ಬಡ ಕುಟುಂಬಗಳು ಬಲಿಯಾಗುತ್ತಿವೆ’ ಎಂದು ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ ಹೇಳಿದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಕೆ,ಶ್ರೀನಿವಾಸಗೌಡ, ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಹನುಮಯ್ಯ, ಮಂಜುನಾಥ್, ಫಾರೂಕ್‌ ಪಾಷಾ, ಪ್ರಭಾಕರ್, ಆನಂದ್, ಸುಧಾಕರ್, ವಿನೋದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.