ADVERTISEMENT

ಸಂವಿಧಾನ ತಿದ್ದುಪಡಿಗೆ ಯತ್ನಿಸಿದರೆ ಹೋರಾಟ: ಜಿ.ಪಂ ಸದಸ್ಯ ಅರುಣ್ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 19 ಮೇ 2019, 12:38 IST
Last Updated 19 ಮೇ 2019, 12:38 IST
ಕೋಲಾರದಲ್ಲಿ ಕರ್ನಾಟಕ ದಲಿತ ಮತ್ತು ಅಲ್ಪ ಸಂಖ್ಯಾತರ ಒಕ್ಕೂಟದಿಂದ ಭಾನುವಾರ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಕೋಲಾರದಲ್ಲಿ ಕರ್ನಾಟಕ ದಲಿತ ಮತ್ತು ಅಲ್ಪ ಸಂಖ್ಯಾತರ ಒಕ್ಕೂಟದಿಂದ ಭಾನುವಾರ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.   

ಕೋಲಾರ: ಡಾ.ಬಿ.ಅರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಯಾರಾದರೂ ತಿದ್ದುಪಡಿ ಮಾಡಲು ಯತ್ನಿಸಿದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್ ಪ್ರಸಾದ್ ಎಚ್ಚರಿಕೆ ನೀಡಿದರು.

ಕರ್ನಾಟಕ ದಲಿತ ಮತ್ತು ಅಲ್ಪ ಸಂಖ್ಯಾತರ ಒಕ್ಕೂಟದಿಂದ ಇಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ದಲಿತರ ಹಕ್ಕುಗಳ ಜಾಗೃತಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ದೇಶದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದರ ಮಾರ್ಗದರ್ಶನದ ಅಡಿಯಲ್ಲೇ ವಿವಿಧ ಪಕ್ಷಗಳು ಅಧಿಕಾರಿಗಳು ನಡೆಸುತ್ತಿವೆ. ಇಂತಹ ಪವಿತ್ರ ಸಂವಿಧಾನವನ್ನು ತಿದ್ದುಪಡಿ ಮಾಡುವುದಾಗಿ ಬಿಜೆಪಿ ಮುಖಂಡರು ಹೇಳಿದ್ದರು. ಆನಂತರ ಇದಕ್ಕೆ ತಕ್ಕ ಪಾಠ ಜನರೇ ಕಲಿಸಿದರು ಎಂದರು.

ADVERTISEMENT

ಸಂವಿಧಾನದ ಆಧಾರದ ಮೇಲೆಯೇ ಚುನಾವಣೆಗಳು ನಡೆಯುತ್ತಿವೆ. ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರು ತಿದ್ದುಪಡಿ ಮಾಡುವುದಾಗಿ ಹೇಳಿದ್ದರು. ಆದರೆ ಅವರ ಪ್ರಯತ್ನಕ್ಕೆ ಬಿಜೆಪಿಯಿಂದಲೇ ವಿರೋಧ ವ್ಯಕ್ತವಾಯಿತು ಎಂದು ಹೇಳಿದರು.

ಅಂಬೇಡ್ಕರ್ ಜೀವಂತವಾಗಿ ನಮ್ಮ ಕಣ್ಣ ಮುಂದೆ ಇಲ್ಲದಿದ್ದರೂ ಸಂವಿಧಾನದ ಮೂಲಕ ನಮ್ಮೊಟ್ಟಿಗೆ ಇದ್ದಾರೆ. ಅವರ ಆಶಯಗಳನ್ನು ಈಡೇರಿಸಲು ವಿದ್ಯಾರ್ಥಿಗಳು, ಸಂಘಸಂಸ್ಥೆಗಳವರು ಸಹಕಾರ ನೀಡಬೇಕು. ಅವರು ಕಲ್ಪಿಸಿರುವ ಮೀಸಲಾತಿಯಿಂದಲೇ ರಾಜಕೀಯ ಕ್ಷೇತ್ರದಲ್ಲಿ ದಲಿತರು ಸ್ಥಾನಮಾನ ಪಡೆದುಕೊಳ್ಳಲು ಅವಕಾಶ ಸಿಕ್ಕಿದೆ ಎಂದರು.

ವೇಮಗಲ್ ಪೋಲಿಸ್ ಠಾಣೆ ಪಿಎಸ್‍ಐ ಕೇಶವಮೂರ್ತಿ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಚರಿತ್ರೆ ಅಧ್ಯಯನ ಮಾಡಿದಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಟ್ಟರು.

ಭಾರತೀಯ ದಲಿತ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸಮಾಜದಲ್ಲಿನ ಈಗಿನ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಬೇಸರವಾಗುತ್ತಿದೆ. ನಮ್ಮ ರಕ್ಷಣೆಗೆ ನಾವೇ ಮುಂದಾಗದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಕೇಂದ್ರದಲ್ಲಿ ಸತತವಾಗಿ ನಡೆದ ಹೋರಾಟದ ಫಲವಾಗಿ ಕೆಸಿ ವ್ಯಾಲಿ ಯೋಜನೆ ಅನುಷ್ಟಾನಗೊಂಡಿದೆ. ಸರ್ಕಾರ ನೀರಿನ ಗುಣಮಟ್ಟ ಖಾತರಿ ಪಡಿಸದರೆ ಕೆರೆಗಳಿಗೆ ನೀರು ಹರಿಸುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಮನೆ ಮಾಡಿದೆ. ಕೂಡಲೇ ಸರ್ಕಾರ ನೀರನ್ನು ಮೂರು ಭಾರಿ ಶುದ್ಧೀಕರಿಸಿ ಹರಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ ಮುನಿರಾಜು, ಕರಾಟೆ ಕ್ರೀಡಾಪಟು ರುಸುಮಾ ಕೌಸರ್‌, ಕಲಾವಿದ ಕೃಷ್ಣ, ಗಾಯಕ ತನುಷ್‌ನನ್ನು ಸನ್ಮಾನಿಸಲಾಯಿತು.

ಕರ್ನಾಟಕ ದಲಿತ ಸಿಂಹ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶ್, ಗುತ್ತಿಗೆದಾರ ಮಾರ್ಜೇನಹಳ್ಳಿ ಬಾಬು, ಕಲಾವಿದ ಕೃಷ್ಣ, ಮಹೇಶ್ ಪಿಯು ಕಾಲೇಜಿನ ಅಡಳಿತಾಧಿಕಾರಿ ಪ್ರವೀಣ್‍ಗೌಡ, ಉಪನ್ಯಾಸಕಿ ಪ್ರೊ.ನಾಗವೇಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.