ADVERTISEMENT

ತಹಶೀಲ್ದಾರ್‌ ಕಚೇರಿಯಲ್ಲೇ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 26 ಮೇ 2022, 12:41 IST
Last Updated 26 ಮೇ 2022, 12:41 IST

ಕೋಲಾರ: ಜಮೀನಿನ ದಾಖಲೆಪತ್ರಕ್ಕಾಗಿ ತಿಂಗಳುಗಟ್ಟಲೇ ಅಲೆದಾಡಿ ಬೇಸರಗೊಂಡ ರೈತ ನಾರಾಯಣಸ್ವಾಮಿ ಎಂಬುವರು ಇಲ್ಲಿ ಗುರುವಾರ ತಹಶೀಲ್ದಾರ್‌ ಕಚೇರಿಯಲ್ಲೇ ಮೈ ಮೇಲೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸಾರ್ವಜನಿಕರು ಅವರನ್ನು ರಕ್ಷಿಸಿದ್ದಾರೆ.

ತಾಲ್ಲೂಕಿನ ಪುರಹಳ್ಳಿಯ ನಾರಾಯಣಸ್ವಾಮಿ ಅವರು ತಮ್ಮ ಜಮೀನಿನ ಮ್ಯೂಟೇಶನ್‌ಗಾಗಿ ಸುಮಾರು 7 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ, ತಹಶೀಲ್ದಾರ್‌ ಕಚೇರಿಯ ಭೂದಾಖಲೆಗಳ ವಿಭಾಗದ ಸಿಬ್ಬಂದಿಯು ಅವರಿಗೆ ಮ್ಯೂಟೇಶನ್‌ ಕೊಟ್ಟಿರಲಿಲ್ಲ. ಮ್ಯೂಟೇಶನ್‌ಗಾಗಿ ಪ್ರತಿನಿತ್ಯ ಕಚೇರಿಗೆ ಅಲೆದು ಬೇಸರಗೊಂಡಿದ್ದ ನಾರಾಯಣಸ್ವಾಮಿ ತಹಶೀಲ್ದಾರ್‌ ಕಚೇರಿಯಲ್ಲಿ ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರು ಅವರಿಂದ ಬೆಂಕಿ ಪೊಟ್ಟಣ ಕಿತ್ತುಕೊಂಡು ಆತ್ಮಹತ್ಯೆ ಪ್ರಯತ್ನ ವಿಫಲಗೊಳಿಸಿದರು.

‘ನನಗೆ 5 ಹೆಣ್ಣು ಮಕ್ಕಳಿದ್ದು, ಜೀವನ ನಿರ್ವಹಣೆಗೆ ತುಂಬಾ ಸಮಸ್ಯೆಯಾಗಿದೆ. ಈ ಕಾರಣಕ್ಕೆ ಜಮೀನು ಮಾರಾಟಕ್ಕೆ ಇಟ್ಟಿದ್ದು, ಖರೀದಿದಾರರು ಜಮೀನಿನ ದಾಖಲೆಪತ್ರ ಕೇಳಿದ್ದಾರೆ. ಹೀಗಾಗಿ ದಾಖಲೆಪತ್ರ ಕೋರಿ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿ 6 ತಿಂಗಳಾಗಿದೆ. ಭೂದಾಖಲೆಗಳ ವಿಭಾಗದ ಸಿಬ್ಬಂದಿಗೆ ಲಂಚ ಸಹ ಕೊಟ್ಟಿದ್ದೇನೆ. ಆದರೂ ಮ್ಯೂಟೇಶನ್‌ ಕೊಡದೆ ಸತಾಯಿಸುತ್ತಿರುವ ಸಿಬ್ಬಂದಿ ಪ್ರತಿ ಬಾರಿ ನಾಳೆ ಬಾ ಎಂದು ಹೇಳುತ್ತಾರೆ. ಸಿಬ್ಬಂದಿಯ ವರ್ತನೆಯಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದೆ’ ಎಂದು ನಾರಾಯಣಸ್ವಾಮಿ ಅಳಲು ತೋಡಿಕೊಂಡರು.

ADVERTISEMENT

ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಗಲ್‌ಪೇಟೆ ಪೊಲೀಸರು ತಹಶೀಲ್ದಾರ್‌ ಬಳಿ ಚರ್ಚಿಸಿ ಮ್ಯೂಟೇಶನ್‌ ಕೊಡಿಸುವುದಾಗಿ ಭರವಸೆ ನೀಡಿ ನಾರಾಯಣಸ್ವಾಮಿ ಅವರನ್ನು ಸಮಾಧಾನಪಡಿಸಿದರು.

‘ತಹಶೀಲ್ದಾರ್‌ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಲಂಚ ಕೊಡದೆ ಒಂದು ಕೆಲಸ ಸಹ ಆಗಲ್ಲ. ನಮ್ಮ ಜಮೀನಿನ ದಾಖಲೆಪತ್ರಕ್ಕೆ ನಾವೇ ಕಳ್ಳರಂತೆ ಅಲೆಯುವ ಪರಿಸ್ಥಿತಿಯಿದೆ. ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.