ADVERTISEMENT

ಸಂವಿಧಾನ ಶೋಷಿತರ ಬದುಕಿಗೆ ಆಸರೆ

ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಜಯದೇವ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 14:40 IST
Last Updated 6 ಡಿಸೆಂಬರ್ 2021, 14:40 IST
ಕೋಲಾರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು
ಕೋಲಾರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು   

ಕೋಲಾರ: ‘ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ಶೋಷಿತ ವರ್ಗಗಳ ಬದುಕಿಗೆ ಆಸರೆಯಾಗಿದ್ದು, ಅಸಮಾನತೆ ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿ, ‘ಶೋಷಿತರ ಭವಿಷ್ಯ ಉಜ್ವಲಗೊಳಿಸಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ದೇಶದ ಆಶಾಕಿರಣ’ ಎಂದು ಸ್ಮರಿಸಿದರು.

‘ಅಪರೂಪದ ವ್ಯಕ್ತಿತ್ವ ಹಾಗೂ ಸರಸ್ವತಿ ಸಂಪತ್ತು ಹೊಂದಿದ್ದ ಅಂಬೇಡ್ಕರ್‌ ದೇಶದಲ್ಲಿ ಜನಿಸದಿದ್ದರೆ ದಲಿತರು ನಿರ್ಭಯವಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಜಗತ್ತಿನಲ್ಲಿ ಅಂಬೇಡ್ಕರ್‌ ಹೆಸರು ಎಲ್ಲರಿಗೂ ಚಿರಪರಿಚಿತ. ದೇಶದ ಅಸ್ತಿತ್ವ ಇರುವವರೆಗೂ ಅವರ ಹೆಸರು ಪ್ರಚಲಿತ. ಅವರ ರಚನೆಯ ಸಂವಿಧಾನವನ್ನು ಗೌರವಿಸುವುದು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಹೇಳಿದರು.

ADVERTISEMENT

‘ಇಡೀ ಜಗತ್ತಿನಲ್ಲಿ ನಮ್ಮದು ಶ್ರೇಷ್ಠ ಸಂವಿಧಾನವಾಗಿದೆ. ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಸಂವಿಧಾನ ರಚಿಸಿ ಅಂಬೇಡ್ಕರ್‌ ಜನಮಾನಸದಲ್ಲಿ ವಿರಾಜಮಾನರಾಗಿದ್ದಾರೆ. ಭಾರತದಂತಹ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ಸಂವಿಧಾನದ ಆಶಯ ಮಹತ್ವದ್ದು. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ರ ಪರಿಶ್ರಮದ ಬಗ್ಗೆ ಇಡೀ ದಿನ ಮಾತನಾಡಿದರೂ ಸಾಲದು’ ಎಂದು ಬಣ್ಣಿಸಿದರು.

‘ಪ್ರಕೃತಿಯು ಎಲ್ಲರಿಗೂ ಗಾಳಿ, ಬೆಳಕು, ನೀರನ್ನು ಸಮನಾಗಿ ನೀಡಿದ್ದರೂ ಜಾತೀಯತೆ, ಮೌಢ್ಯತೆ, ಮೈಲಿಗೆ ಹೆಸರಿನಲ್ಲಿ ದಲಿತರನ್ನು ಶೋಷಿಸಲಾಗುತ್ತಿತ್ತು. ಅಂಬೇಡ್ಕರ್ ದೌರ್ಜನ್ಯಕ್ಕೆ ಒಳಗಾದವರಿಗೆ ಮತ್ತು ಅವಮಾನ ಅನುಭವಿಸಿದವರ ಪರವಾಗಿ ದೊಡ್ಡ ಕ್ರಾಂತಿ ಮಾಡಿ ಸಮಾನತೆಯ ಅರಿವು ಮೂಡಿಸಿದರು. ಅವರ ಶ್ರಮದಿಂದ ಬದಲಾವಣೆ ಪರ್ವ ಆರಂಭವಾಗಿ ಸುಧಾರಣೆ ಕಾಣುವಂತಾಯಿತು’ ಎಂದರು.

ವಿಚಾರಧಾರೆ ಪೂರಕ: ‘ಶೋಷಿತರು ಅನುಭವಿಸಿದ ನೋವು ಗಮನಿಸಿದ ಅಂಬೇಡ್ಕರ್ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆಯಬೇಕೆಂಬ ಉದ್ದೇಶದಿಂದ ಸಂವಿಧಾನ ರಚಿಸಿದರು. ಆ ಸಂವಿಧಾನದಿಂದಲೇ ಪ್ರತಿಯೊಬ್ಬರು ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಅಂಬೇಡ್ಕರ್‌ ವಿಚಾರಧಾರೆ ಸಮ ಸಮಾಜಕ್ಕೆ ಪೂರಕ. ದೇಶದ ಪ್ರಜೆಗಳು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಪ್ರಧಾನ ಕಾರ್ಯದರ್ಶಿ ರೂಪಾ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.