ADVERTISEMENT

ಉರ್ದು ಫಲಿತಾಂಶ ಸುಧಾರಣೆಗೆ ಕ್ರಮಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 14:09 IST
Last Updated 11 ಫೆಬ್ರುವರಿ 2019, 14:09 IST
ಶಿಕ್ಷಣ ಇಲಾಖೆಯಿಂದ ತಯಾರಿಸಿರುವ ‘ನನ್ನನ್ನೊಮ್ಮೆ ಗಮನಿಸಿ’ ಮಾದರಿ ಪ್ರಶ್ನೆಕೋಠಿಯನ್ನು ಕೋಲಾರದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ಸೋಮವಾರ ಬಿಡುಗಡೆ ಮಾಡಿದರು.
ಶಿಕ್ಷಣ ಇಲಾಖೆಯಿಂದ ತಯಾರಿಸಿರುವ ‘ನನ್ನನ್ನೊಮ್ಮೆ ಗಮನಿಸಿ’ ಮಾದರಿ ಪ್ರಶ್ನೆಕೋಠಿಯನ್ನು ಕೋಲಾರದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ಸೋಮವಾರ ಬಿಡುಗಡೆ ಮಾಡಿದರು.   

ಕೋಲಾರ: ‘ಉರ್ದು ಮಾಧ್ಯಮದಲ್ಲಿನ ಫಲಿತಾಂಶ ಕುಸಿತದಿಂದ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಈಗಲೇ ಎಚ್ಚೆತ್ತುಕೊಂಡು ಫಲಿತಾಂಶ ಸುಧಾರಣೆಗೆ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ನಗರದಲ್ಲಿ ಸೋಮವಾರ ‘ನನ್ನನ್ನೊಮ್ಮೆ ಗಮನಿಸಿ’ ಮಾದರಿ ಪ್ರಶ್ನೆಕೋಠಿ ಬಿಡುಗಡೆ ಮಾಡಿ ಮಾತನಾಡಿ, ‘ಜಿಲ್ಲೆಯಲ್ಲಿ 27 ಉರ್ದು ಶಾಲೆಗಳಿದ್ದು, ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ತಿಳಿಸಿದರು.

‘ಪದವಿ ಪೂರ್ವ ಕಾಲೇಜುಗಳ ಫಲಿತಾಂಶ ಕಡಿಮೆ ಬಂದಿರುವುದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಇದನ್ನು ಸರಿಪಡಿಸಲು ಈಗಾಗಲೇ ನಾನೇ ಜೂನಿಯರ್ ಕಾಲೇಜುಗಳ ಉಪಪ್ರಾಂಶುಪಾಲರ ಸಭೆ ನಡೆಸಿದ್ದೇನೆ. ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದರು.

ADVERTISEMENT

‘ಕಲಿಕೆಯಲ್ಲಿ ಎಷ್ಟೇ ಹಿಂದುಳಿದಿದ್ದರೂ, ಅವರನ್ನು ಕನಿಷ್ಟ ತೇರ್ಗಡೆಯ ಹಂತಕ್ಕೆ ತರಲು ಕಷ್ಟವೇನಿಲ್ಲ. ಪ್ರಾಂಶುಪಾಲರು, ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಿದರೆ ಗುರಿ ಸಾಧನೆಯಾಗುತ್ತದೆ’ ಎಂದು ತಿಳಿಸಿದರು.

‘ಈಗಾಗಲೇ ಜೂನಿಯರ್ ಕಾಲೇಜುಗಳ ಫಲಿತಾಂಶ ಕುಸಿತ ತಪ್ಪಿಸಲು ಪ್ರತಿ ಸಂಸ್ಥೆಗೂ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಕಲಿಕೆ ದೃಢೀಕರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ನಿರಂತರವಾಗಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಹೇಳಿದರು.

ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾತನಾಡಿ, ‘ಉರ್ದು ಪ್ರಥಮ ಭಾಷೆ ಇರುವ ಮಕ್ಕಳು ತೃತೀಯ ಭಾಷೆ ಕನ್ನಡದಲ್ಲೇ ಅತಿ ಹೆಚ್ಚು ಅನುತ್ತೀರ್ಣಗೊಳ್ಳುತ್ತಿದ್ದಾರೆ. ಇದು ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.