ADVERTISEMENT

ಜವಾಬ್ದಾರಿ ಅರಿತು ವಾಹನ ಚಾಲನೆ ಮಾಡಿ

ಚಾಲಕರಿಗೆ ಸಾರಿಗೆ ಇಲಾಖೆ ಜಂಟಿ ಆಯುಕ್ತ ಮಲ್ಲಿಕಾರ್ಜುನ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 13:53 IST
Last Updated 13 ಫೆಬ್ರುವರಿ 2019, 13:53 IST
ಕೋಲಾರದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಾರಿಗೆ ಇಲಾಖೆ ಜಂಟಿ ಆಯುಕ್ತ ಮಲ್ಲಿಕಾರ್ಜುನ್ ಬಹುಮಾನ ವಿತರಿಸಿದರು.
ಕೋಲಾರದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಾರಿಗೆ ಇಲಾಖೆ ಜಂಟಿ ಆಯುಕ್ತ ಮಲ್ಲಿಕಾರ್ಜುನ್ ಬಹುಮಾನ ವಿತರಿಸಿದರು.   

ಕೋಲಾರ: ‘ಚಾಲಕರು ಜವಾಬ್ದಾರಿ ಅರಿತು ವಾಹನ ಚಾಲನೆ ಮಾಡಿದಾಗ ಅಪಘಾತ ಪ್ರಮಾಣ ತಗ್ಗಿಸಬಹುದು’ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಸಾರಿಗೆ ಇಲಾಖೆಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಚಾಲಕರು ಸಂಚಾರ ನಿಯಮ ಉಲ್ಲಂಘಿಸಿದರೆ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಸಂಚಾರ ನಿಯಮ ಪಾಲನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಅಪಘಾತ ಪ್ರಕರಣಗಳಿಂದ ಆಗುತ್ತಿರುವ ಸಾವು ನೋವು ಯೋಚಿಸಿದರೆ ಭಯವಾಗುತ್ತದೆ. ವ್ಯಕ್ತಿ ಜೀವಂತವಾಗಿದ್ದರೆ ಬೆಳೆದು ದೇಶಕ್ಕೆ ಯಾವ ಕೊಡುಗೆ ನೀಡುತ್ತಾನೋ ಗೊತ್ತಿರುವುದಿಲ್ಲ. ಅಂತಹ ಪ್ರತಿಭೆಯನ್ನು ಎಳೆಯ ವಯಸ್ಸಿನಲ್ಲೇ ಕಮರಿಸಿದಂತಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ದೇಶದಲ್ಲಿ 2020ರ ವೇಳೆಗೆ ಅಪಘಾತ ಪ್ರಮಾಣವನ್ನು ಶೇ 10ರಿಂದ 20ರಷ್ಟು ಕಡಿಮೆಗೊಳಿಸಲು ರಸ್ತೆ ಸುರಕ್ಷತಾ ಸಮಿತಿಯಿಂದ ಕಾರ್ಯಕ್ರಮ ರೂಪಿಸಲಾಗಿದೆ. ಅಪಘಾತ ನಿಯಂತ್ರಿಸುವುದು ಎಲ್ಲರ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

‘ಪ್ರಾದೇಶಿಕ ಸಾರಿಗೆ ಅಧಿಕಾರಿ, ಸಂಚಾರ ಪೊಲೀಸರು, ಆರೋಗ್ಯ ಮತ್ತು ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ, ನಿರ್ಮಿತಿ ಕೇಂದ್ರ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಿಬ್ಬಂದಿಯು ಅಪಘಾತ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.

‘ನಗರ ಪ್ರದೇಶದಲ್ಲಿ ಆರಂಭಿಸಿರುವ ರಸ್ತೆ ಸುರಕ್ಷತಾ ವಿಭಾಗದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಮುಂಭಾಗದಲ್ಲಿ ಶಾಲಾ ವಾಹನ ಹೋಗುತ್ತಿದ್ದರೆ ಅದನ್ನು ಹಿಂದಿಕ್ಕುವ ಪ್ರಯತ್ನ ಮಾಡದೆ ಮಕ್ಕಳ ಸುರಕ್ಷತೆ ಬಗ್ಗೆ ಆಲೋಚಿಸಬೇಕು’ ಎಂದು ಹೇಳಿದರು.

ವರ್ಷವಿಡೀ ಚಟುವಟಿಕೆ: ‘ರಸ್ತೆ ಸುರಕ್ಷತಾ ಸಪ್ತಾಹವು ವರ್ಷವಿಡೀ ಜರುಗುವ ಚಟುವಟಿಕೆ. ಎಲ್ಲಾ ವರ್ಗದ ಚಾಲಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ರಸ್ತೆ ಸುರಕ್ಷತಾ ವಿಭಾಗ ಆರಂಭಿಸಲಾಗಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನೇಫಾನಂದ್ ಮಾಹಿತಿ ನೀಡಿದರು.

‘ಬೈಕ್‌ ಸವಾರರು ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಇಲ್ಲದಿದ್ದರೆ ಅಪಘಾತದ ಸಂದರ್ಭದಲ್ಲಿ ಶೇ 90ರಷ್ಟು ತಲೆಯ ಭಾಗಕ್ಕೆ ಪೆಟ್ಟಾಗುವ ಸಾಧ್ಯತೆ ಹೆಚ್ಚು. ಪಾದಚಾರಿಗಳು ರಸ್ತೆಯ ಬಲ ಭಾಗದಲ್ಲಿ ಮತ್ತು ಪಾದಚಾರಿ ಮಾರ್ಗದಲ್ಲೇ ನಡೆದು ಹೋಗಬೇಕು. ವಾಹನ ಸವಾರರು ರಸ್ತೆಯ ಎಡ ಬದಿಯಲ್ಲೇ ಸಂಚರಿಸಿದರೆ ಅಪಘಾತದ ಪ್ರಮಾಣ ತಗ್ಗಿಸಬಹುದು’ ಎಂದರು.

ಒಗ್ಗೂಡಿ ಆಯೋಜಿಸಿ: ‘ಆರ್‌ಟಿಒ ಮತ್ತು ಪೊಲೀಸ್‌ ಇಲಾಖೆ ಒಗ್ಗೂಡಿ ರಸ್ತೆ ಸುರಕ್ಷತಾ ಸಪ್ತಾಹ ಆಯೋಜಿಸಬೇಕು’ ಎಂದು ರಾಜ್ಯ ಆಟೊ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಮನವಿ ಮಾಡಿದರು.

‘ಜಿಲ್ಲೆಗಳಲ್ಲಿ ರಸ್ತೆ ಸುರಕ್ಷತಾ ಸಮಿತಿ ಇದೆ. ಆರ್‌ಟಿಒಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಸಾರ್ವತ್ರಿಕವಾಗಿ ಮಾಡುವ ಕೆಲಸ ಪರಿಣಾಮಕಾರಿಯಾಗುತ್ತದೆ. ಸಂಚಾರ ನಿಯಮ ಪಾಲನೆ ಕುರಿತು ತಿಂಗಳಿಗೊಮ್ಮೆ ಜಾಗೃತಿ ಕಾರ್ಯಕ್ರಮ ನಡೆಸಲು ಚಾಲನಾ ತರಬೇತಿ ಮಾಲೀಕರ ಒಕ್ಕೂಟದಿಂದ ಸಹಕಾರ ನೀಡುತ್ತೇವೆ’ ಎಂದರು.

ಹೋಂಡ ಕಂಪನಿಯ ವೃತ್ತಿಪರ ಬೈಕ್ ರೇಡರ್‌ ವಿ.ಅಭಿಷೇಕ್ ವಾಹನ ಚಾಲನೆಯ ಸುರಕ್ಷಿತ ಕ್ರಮಗಳ ಕುರಿತು ಅರಿವು ಮೂಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಜಯ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಕೆಜಿಎಫ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಯೋಮಕೇಶಪ್ಪ, ಕೋಲಾರ ಆರ್‌ಟಿಒ ಕಚೇರಿ ನಿರೀಕ್ಷಕ ವಿಶ್ವಜಿತ್, ವ್ಯವಸ್ಥಾಪಕ ಶ್ರೀನಿವಾಸ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.