
ಮಾಲೂರು: ಕನ್ನಡಿಗರ ಮಕ್ಕಳೇ ಕನ್ನಡ ಶಾಲೆಗೆ ಹೋಗದಿರುವ ಈ ದಿನಗಳಲ್ಲಿ ತಮಿಳುನಾಡಿನ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಕಲಿಯಲು ನಿತ್ಯ ಗಡಿ ದಾಟಿ ಬರುತ್ತಿದ್ದಾರೆ.
ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮನೆಗಳು ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ನೆರೆಯ ತಮಿಳುನಾಡಿನಿಂದ ಮೂವರು ಮಕ್ಕಳು ಬಂದು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ.
ತಮಿಳುನಾಡಿನ ಗಡಿಗೆ ಕೂಗಳತೆ ದೂರದಲ್ಲಿರುವ ಪುಟ್ಟ ಗ್ರಾಮವಾದ ಹೊಸಮನೆಗಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ಆರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆ ಪೈಕಿ ಮೂವರು ಹೊಸಮನೆ ಗ್ರಾಮದವರಾಗಿದ್ದರೆ, ಇನ್ನೂ ಮೂವರು ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಚಾಪರಪಲ್ಲಿ ಗ್ರಾಮದ ಮಕ್ಕಳು.
4ನೇ ತರಗತಿಯಲ್ಲಿರುವ ಸುಮಿತ್ರಾ, ಕುಮಾರ್ ಹಾಗೂ 5ನೇ ತರಗತಿಯ ಶಂಕರನ್ ಸ್ಪಷ್ಟವಾಗಿ ಕನ್ನಡ ಓದಿ, ಬರೆಯುತ್ತಾರೆ. ಸ್ಫುಟವಾಗಿ ಕನ್ನಡ ಮಾತನಾಡುತ್ತಾರೆ.
ಆದರೆ, ಈ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲ. ಮೂರು ವರ್ಷಗಳಿಂದ ಅತಿಥಿ ಶಿಕ್ಷಕರೊಬ್ಬರೇ ಮಕ್ಕಳಿಗೆ ಆಟ, ಪಾಠ ಹೇಳಿ ಕೊಡುತ್ತಿದ್ದಾರೆ. ಹಾಗಾಗಿ ಮಕ್ಕಳ ದಾಖಲಾತಿ ಕುಂಠಿತಗೊಂಡಿದೆ.
ತಮಿಳುನಾಡಿನಿಂದ ನಮ್ಮ ರಾಜ್ಯದ ಕನ್ನಡ ಶಾಲೆಗೆ ಬಂದು ಕನ್ನಡ ಕಲಿಯುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ನಮ್ಮ ಜವಾಬ್ದಾರಿ. ಹಾಗಾಗಿ ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು. ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು ಈಗಾಗಲೇ ಅತಿಥಿ ಶಿಕ್ಷರರೊಬ್ಬರನ್ನು ನೇಮಿಸಲಾಗಿದೆ. ವಾರದಲ್ಲಿ ಶಾಲೆಗೆ ಭೇಟಿ ನೀಡಲಾಗುವುದು. ಶೀಘ್ರ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು.–ಕೆಂಪಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಮಾಲೂರು
ನನಗೆ ಕನ್ನಡ ಕಲಿಯಲು ತುಂಬಾ ಇಷ್ಟ. ಹಾಗಾಗಿ ಕನ್ನಡ ಕಲಿಯಲು ಕನ್ನಡ ಶಾಲೆಗೆ ಸೇರಿದ್ದೇನೆ. 1ನೇ ತರಗತಿಯಿಂದ ಕನ್ನಡ ಶಾಲೆಯಲ್ಲಿ ಓದುತ್ತಿದ್ದೇನೆ. ನನ್ನ ಪೋಷಕರು ಕೂಲಿ ಮಾಡಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.–ಶಂಕರನ್, ಐದನೇ ತರಗತಿ ವಿದ್ಯಾರ್ಥಿ
ಹೊಸಮನೆಗಳು ಶಾಲೆಗೆ ತಮಿಳುನಾಡಿನ ಚಾಪರಪಲ್ಲಿಯಿಂದ ನಾಲ್ವರು ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಒಬ್ಬ ವಿದ್ಯಾರ್ಥಿ ಶಾಲೆಗೆ ಬರುತ್ತಿಲ್ಲ. ಮೂವರು ತಪ್ಪದೇ ಶಾಲೆಗೆ ಹಾಜರಾಗುತ್ತಿದ್ದಾರೆ. ಚೆನ್ನಾಗಿ ಕನ್ನಡ ಕಲಿಯುತ್ತಿದ್ದಾರೆ.–ಗಿರಿಜಾ, ಅತಿಥಿ ಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.