ADVERTISEMENT

ಬಂಗಾರಪೇಟೆ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಹೋದ ಶಿಕ್ಷಕನಿಗೆ ಕಚ್ಚಿದ ನಾಯಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 7:02 IST
Last Updated 26 ಸೆಪ್ಟೆಂಬರ್ 2025, 7:02 IST
ಬಂಗಾರಪೇಟೆ ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಗೆ ಗುರುವಾರ ಭೇಟಿ ನೀಡಿದ ಶಿಕ್ಷಕರು, ತಹಶೀಲ್ದಾರ್ ಮತ್ತು ಬಿಇಒಗೆ ಮನವಿ ಸಲ್ಲಿಸಿದರು
ಬಂಗಾರಪೇಟೆ ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಗೆ ಗುರುವಾರ ಭೇಟಿ ನೀಡಿದ ಶಿಕ್ಷಕರು, ತಹಶೀಲ್ದಾರ್ ಮತ್ತು ಬಿಇಒಗೆ ಮನವಿ ಸಲ್ಲಿಸಿದರು   

ಬಂಗಾರಪೇಟೆ: ತಾಲ್ಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ನಾಯಿಯೊಂದು ದಾಳಿ ಮಾಡಿದೆ. ಶಿಕ್ಷಕನ ಕಾಲಿಗೆ ಗಾಯವಾಗಿದೆ. ಹೀಗಾಗಿ, ಗಾಯಾಳು ಶಿಕ್ಷಕ ವೆಂಕಟಪ್ಪ ಅವರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವುದರಿಂದ ವಿನಾಯಿತಿ ನೀಡಬೇಕು ಎಂದು ತಹಶೀಲ್ದಾರ್ ಮತ್ತು ಬಿಇಒ ಅವರಿಗೆ ಸಹ ಶಿಕ್ಷಕರು ಮನವಿ ಸಲ್ಲಿಸಿದರು. 

ರೆಡ್ಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೆಂಕಟಪ್ಪ ಗುರುವಾರ ಬೆಳಿಗ್ಗೆ ದೇಶಿಹಳ್ಳಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ನಾಯಿ, ಏಕಾಏಕಿ ಶಿಕ್ಷಕನ ಬಲಗಾಲನ್ನು ಕಚ್ಚಿದೆ. ಶಿಕ್ಷಕ ವೆಂಕಟಪ್ಪ ಅವರನ್ನು ಇತರ ಶಿಕ್ಷಕರು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಗಾಯಕ್ಕೆ ಒಳಗಾದ ಶಿಕ್ಷಕ ವೆಂಕಟಪ್ಪ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದು, ಅವರನ್ನು ಸಮೀಕ್ಷಾ ಕಾರ್ಯದಿಂದ ಕೈಬಿಡಬೇಕು ಎಂದು  ಇತರ ಶಿಕ್ಷಕರು ಮನವಿ ಮಾಡಿದರು. 

ಗಾಯಾಳು ವೆಂಕಟಪ್ಪ ಮಾತನಾಡಿ, ‘ದೇಶಿಹಳ್ಳಿ ಗ್ರಾಮದ ಮನೆಯೊಂದರ ಬಳಿ ಸಮೀಕ್ಷೆಗೆ ಹೋದಾಗ, ನಾಯಿ ಕಚ್ಚಿದೆ. ನಾಯಿಯ ಮೂರು ಹಲ್ಲುಗಳ ಗುರುತು ಬಿದ್ದಿದೆ. ರಕ್ತಸ್ರಾವ ಹೆಚ್ಚಾದ ಕಾರಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇನೆ. ಬಂಗಾರಪೇಟೆ ಪಟ್ಟಣ ಸೇರಿದಂತೆ ದೇಶಿಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳು ಹೆಚ್ಚಾಗಿರುವ ಕಾರಣ ಮನೆ ಸಮೀಕ್ಷೆಗೆ ದೊಡ್ಡ ಸಮಸ್ಯೆ ಎದುರಾಗಿದೆ’ ಎಂದು ಹೇಳಿದರು. 

ADVERTISEMENT

ಈ ಸಂದರ್ಭದಲ್ಲಿ ನಾರಾಯಣಸ್ವಾಮಿ, ಶ್ಯಾಮಮೂರ್ತಿ, ಮುನಿನಾರಾಯಣಪ್ಪ, ನಾಗರಾಜ, ವೆಂಕಟರಾಮ, ಸತೀಶ್, ಅಶೋಕ, ನಾಗರಾಜ್, ವಿಜಯಕುಮಾರ್, ನಾರಾಯಣಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.