ADVERTISEMENT

ಶ್ರಾವಣಮಾಸದ 2 ನೇ ಶನಿವಾರದಂದು ದೇವಾಲಯಗಳಿಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 12:33 IST
Last Updated 26 ಆಗಸ್ಟ್ 2023, 12:33 IST
ಚಿಂತಾಮಣಿಯ ವರದಾದ್ರಿ ಬೆಟ್ಟದಲ್ಲಿರುವ ವರದಾಂಜನೇಯಸ್ವಾಮಿಗೆ ಶನಿವಾರ ಮಾಡಿದ್ದ ವಿಶೇಷ ಅಲಂಕಾರ
ಚಿಂತಾಮಣಿಯ ವರದಾದ್ರಿ ಬೆಟ್ಟದಲ್ಲಿರುವ ವರದಾಂಜನೇಯಸ್ವಾಮಿಗೆ ಶನಿವಾರ ಮಾಡಿದ್ದ ವಿಶೇಷ ಅಲಂಕಾರ   

ಚಿಂತಾಮಣಿ: ಬರಗಾಲದ ಆತಂಕದ ನಡುವೆಯೂ ಶ್ರಾವಣಮಾಸದ ಎರಡನೇ ಶನಿವಾರವದ ಅಂಗವಾಗಿ ನಗರ ಹಾಗೂ ತಾಲ್ಲೂಕಿನ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಗಳು ಶ್ರದ್ದಾ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ನೆರವೇರಿದವು.
ತಾಲ್ಲೂಕಿನ ಬಹುತೇಕ ಎಲ್ಲ ದೇವಾಲಯಗಳಲ್ಲೂ ಜನಜಂಗುಳಿ ಕಂಡುಬಂತು. ಜನರು ದಂಡು ದಂಡಾಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ವಿವಿಧ ದೇವಾಲಯಗಳಿಗೆ ದಾಂಗುಡಿ ಇಡುತ್ತಿದ್ದರು.
ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಏನಿಗದಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಕುಂಠಪುರದ ಶ್ರೀಹರಿಕ್ಷೇತ್ರದಲ್ಲಿ ವೆಂಕಟರಮಣಸ್ವಾಮಿಗೆ ಮಾಡಿದ್ದ ವಿಶೇಷ ಅಲಂಕಾರ ಭಕ್ತರ ಗಮನಸೆಳೆಯುತ್ತಿತ್ತು. ಸ್ವಾಮಿಗೆ ಅಭಿಷೇಕ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದವು. ಧರ್ಮದರ್ಶಿ ನಿವೃತ್ತ ಪ್ರಾಧ್ಯಾಪಕ ಪ್ರೊ.ವೆಂಕಟರೆಡ್ಡಿ ಧಾರ್ಮಿಕ ಕಾರ್ಯಕ್ರಮಗಳ ಮೇಲ್ವಿಚಾರಣೆ ವಹಿಸಿದ್ದರು.


ನಗರದ ವರದಾದ್ರಿ ಬೆಟ್ಟದಲ್ಲಿ ವರದಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ ಮತ್ತಿತರ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಸ್ವಾಮಿಗೆ ಕೊಬ್ಬರಿ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೂ ನಗರದ ಜನರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು. ವಿಶೇಷ ಹೂವಿನ ಅಲಂಕಾರ, ವಿದ್ಯುತ್ ದೀಪಗಳ ಅಲಂಕಾರ ಕಣ್ಣು ಕೋರೈಸುತಿತ್ತು. ದೇವಾಲಯದ ಟ್ರಸ್ಟ್ ನ ಪದಾಧಿಕಾರಿಗಳು ಭಾಗವಹಿಸಿದ್ದರು.


ಕೈವಾರ: ಪ್ರಸಿದ್ದ ಯಾತ್ರಾಸ್ಥಳ ಕೈವಾರದಲ್ಲೂ ಎರಡನೇ ಶನಿವಾರದಂದು ದೇವಾಲಯಗಳಿಗೆ ಭಕ್ತರು ಎಲ್ಲ ದೇವಾಲಯಗಳಿಗೆ ಎಡತಾಕುತ್ತಿದ್ದರು. ಯೋಗಿನಾರೇಯಣ ಮಠ, ಅಮರನಾರೇಯಣ ದೇವಸ್ಥಾನ, ಭೀಮಲಿಂಗೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಮಹಾಮಂಗಳಾರತಿ ಮತ್ತಿತರ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಸಾವಿರಾರು ಜನ ಭಕ್ತರು ಸರದಿಯ ಸಾಲುಗಳಲ್ಲಿ ನಿಂತು ದೇವರ ದರ್ಶನ ಮಾಡುತ್ತಿದ್ದನ ದೃಶ್ಯಗಳು ಸಾಮಾನ್ಯವಾಗಿದ್ದವು.

ADVERTISEMENT


ಮಹಾಕೈಲಾಸಗಿರಿ, ಆಲಂಬಗಿರಿಯ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಬೂರಗಮಾಕಲಹಳ್ಳಿಯ ವೀರಾಂಜನೇಯಸ್ವಾಮಿ ದೇವಾಲಯ, ಮುರುಗಮಲ್ಲದ ಮುಕ್ತೀಶ್ವರಸ್ವಾಮಿ ದೇವಾಲಯ, ಕುರುಟಹಳ್ಳಿಯ ವೀರಾಂಜನೇಯಸ್ವಾಮಿ ದೇವಾಲಯ, ನಗರದ ಕನಂಪಲ್ಲಿಯ ಪಂಚಮುಖಿ ಆಂಜನೇಯಸ್ವಾಮಿ, ನಾಗನಾಥೇಶ್ವರಸ್ವಾಮಿ, ಅಜಾದ್ಚೌಕದ ಹರಿಹರೇಶ್ವರಸ್ವಾಮಿ, ಬೆಂಗಳೂರು ರಸ್ತೆಯ ಶನಿಮಹಾತ್ಮ ದೇವಾಲಯಗಳಲ್ಲೂ ಶ್ರಾವಣ ಮಾಸದ ವಿಶೇಷ ಅಲಂಕಾರ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.