ADVERTISEMENT

ಸಕಾಲಕ್ಕೆ ಶಾಲೆಗೆ ಪಠ್ಯಪುಸ್ತಕ ವಿತರಣೆ: ಉಪ ನಿರ್ದೇಶಕ ರತ್ನಯ್ಯ

​ಪ್ರಜಾವಾಣಿ ವಾರ್ತೆ
Published 21 ಮೇ 2019, 15:27 IST
Last Updated 21 ಮೇ 2019, 15:27 IST
ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸುವ ಪ್ರಕ್ರಿಯೆಗೆ ಡಿಡಿಪಿಐ ಕೆ.ರತ್ನಯ್ಯ ಕೋಲಾರದಲ್ಲಿ ಮಂಗಳವಾರ ಚಾಲನೆ ನೀಡಿದರು.
ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸುವ ಪ್ರಕ್ರಿಯೆಗೆ ಡಿಡಿಪಿಐ ಕೆ.ರತ್ನಯ್ಯ ಕೋಲಾರದಲ್ಲಿ ಮಂಗಳವಾರ ಚಾಲನೆ ನೀಡಿದರು.   

ಕೋಲಾರ: ‘ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರಿ ಶಾಲೆ ಆರಂಭಕ್ಕೆ ಮುನ್ನವೇ ಶಿಕ್ಷಕರಿಗೆ ಹೊರೆಯಾಗದಂತೆ ಶಾಲೆ ಬಾಗಿಲಿಗೆ ಪುಸ್ತಕ ಸರಬರಾಜು ಮಾಡುತ್ತಿರುವುದು ಒಳ್ಳೆಯ ಪ್ರಯತ್ನ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಕೆ.ರತ್ನಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಠ್ಯಪುಸ್ತಕ ವಿತರಿಸುವ ಪ್ರಕ್ರಿಯೆಗೆ ಇಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿ, ‘ಶಿಕ್ಷಣ ಇಲಾಖೆಯು ಶಾಲೆಗಳಿಗೆ ಸಕಾಲಕ್ಕೆ ಪಠ್ಯಪುಸ್ತಕ ತಲುಪಿಸುವ ಕೆಲಸ ಮಾಡುವ ಮೂಲಕ ಶಿಕ್ಷಕರು ತರಗತಿ ಬಿಟ್ಟು ಪುಸ್ತಕ ಹೊತ್ತೊಯ್ಯುವ ಕೆಲಸ ತಪ್ಪಿಸಿದೆ’ ಎಂದರು.

‘ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 8ನೇ ಸ್ಥಾನ ತಲುಪಿರುವುದರಿಂದ ಗೌರವ ಬಂದಿದೆ. ಇದಕ್ಕೆ ಚ್ಯುತಿ ಬಾರದಂತೆ ಶಿಕ್ಷಕರು ಶೈಕ್ಷಣಿಕ ವರ್ಷದ ಆರಂಭದಲ್ಲೇ ಕ್ರಿಯಾಯೋಜನೆ ರೂಪಿಸಿ ಮುಂದಿನ ವರ್ಷ ಉತ್ತಮ ಫಲಿತಾಂಶ ಸಾಧನೆಗೆ ಪಣ ತೊಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಈ ಬಾರಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕ ಖರೀದಿಗೆ ಆನ್‌ಲೈನ್‌ನಲ್ಲೇ ಹಣ ಪಾವತಿಸಿದ್ದಾರೆ. ನಗದು ವ್ಯವಹಾರಕ್ಕೆ ಅವಕಾಶವೇ ಇಲ್ಲದಂತೆ ಪಾರದರ್ಶಕ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಶಾಲೆ ಬಾಗಿಲಿಗೆ ಪುಸ್ತಕ: ‘ಈ ಬಾರಿ ಮೇ 28ಕ್ಕೂ ಮುನ್ನವೇ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೇ 24ರಿಂದ 28ರವರೆಗೂ ನಿರಂತರವಾಗಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ಪುಸ್ತಕಗಳು ಶಾಲೆ ಬಾಗಿಲಿಗೆ ತಲುಪಲಿವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಮಾಹಿತಿ ನೀಡಿದರು.

‘ಸೂಚಿಸಿರುವ ದಿನಾಂಕದಂದು ಶಾಲೆಗಳಲ್ಲಿ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಹಾಜರಿದ್ದು, ಪಠ್ಯಪುಸ್ತಕ ಪಡೆದುಕೊಳ್ಳಬೇಕು. ಶಾಲೆ ಪ್ರಾರಂಭೋತ್ಸವ ದಿನದಂದೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಬೇಕು’ ಎಂದು ಸೂಚಿಸಿದರು.

ವಾಹನದಲ್ಲಿ ತಲುಪಿಸುತ್ತಾರೆ: ‘ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಿಗೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಸಹಕಾರ ನೀಡಬೇಕು. ಶಾಲೆಗೆ ಪುಸ್ತಕ ಬರುವ ಮುನ್ನ ದಿನ ಬಿಇಒ ಕಚೇರಿ ಆವರಣದ ಪುಸ್ತಕ ಉಗ್ರಾಣದಲ್ಲಿ ಪುಸ್ತಕಗಳನ್ನು ಸಿಆರ್‌ಪಿಗಳ ಸಮ್ಮುಖದಲ್ಲಿ ಬಂಡೆಲ್‌ ಮಾಡುವಂತೆ ಡಿ ದರ್ಜೆ ನೌಕರರಿಗೆ ಸೂಚಿಸಲಾಗಿದೆ. ಈ ಬಂಡೆಲ್‌ಗಳನ್ನು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಸರಕು ಸಾಗಣೆ ವಾಹನದಲ್ಲಿ ಆಯಾ ಶಾಲೆಗಳಿಗೆ ತಲುಪಿಸುತ್ತಾರೆ’ ಎಂದು ಹೇಳಿದರು.

‘ಸ್ಟೂಡೆಂಟ್ಸ್ ಟ್ರ್ಯಾಕಿಂಗ್‌ ಸಿಸ್ಟಮ್‌ನಲ್ಲಿ (ಎಸ್‌ಟಿಎಸ್‌) ಅಳವಡಿಕೆಯಾಗಿರುವ ಸಂಖ್ಯೆಗೆ ಅನುಗುಣವಾಗಿ ಪುಸ್ತಕಗಳನ್ನು ಶಾಲೆಗಳಿಗೆ ಸರಬರಾಜು ಮಾಡಲಾಗುತ್ತದೆ. ಸಿಆರ್‌ಪಿಗಳು ನೀಡುವ ಪಟ್ಟಿಯನ್ನು ತಾಳೆ ನೋಡಿ ಪುಸ್ತಕ ಸರಬರಾಜು ಮಾಡಲಾಗುತ್ತದೆ’ ಎಂದರು.

ಪ್ರಾಮಾಣಿಕ ಪ್ರಯತ್ನ: ‘ತಾಲ್ಲೂಕಿನ 375 ಪ್ರಾಥಮಿಕ ಹಾಗೂ 26 ಸರ್ಕಾರಿ ಪ್ರೌಢ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿಸಲಾಗುತ್ತದೆ. ಶಿಕ್ಷಕರು ಪುಸ್ತಕಗಳಿಗಾಗಿ ಅಲೆಯುವುದನ್ನು ತಪ್ಪಿಸಲು ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಮೊದಲ ಹಂತದಲ್ಲಿ ಈಗ ಬಂದಿರುವ ಪುಸ್ತಕಗಳನ್ನು ತಲುಪಿಸಲಾಗುತ್ತಿದೆ. ಉಳಿದ ಪುಸ್ತಕಗಳು ಬಂದ ಕೂಡಲೇ ಮತ್ತೊಂದು ಸುತ್ತಿನಲ್ಲಿ ರವಾನೆ ಮಾಡುತ್ತೇವೆ’ ಎಂದರು.

ಜಿಲ್ಲಾ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಸದಾನಂದ್, ಮುಳಬಾಗಿಲು ಬಿಇಒ ಕೆಂಪರಾಮು, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎ.ಬಿ.ರಾಮಕೃಷ್ಣಪ್ಪ, ವಿಷಯ ಪರಿವಿಕ್ಷಕರಾದ ಶಶಿವಧನ, ಗಾಯಿತ್ರಿ, ಕೃಷ್ಣಪ್ಪ, ಶಿಕ್ಷಣ ಸಂಯೋಜಕರಾದ ವೆಂಕಟಾಚಲಪತಿ, ಮುನಿರತ್ನಯ್ಯಶೆಟ್ಟಿ, ಆರ್.ಶ್ರೀನಿವಾಸನ್, ರಾಘವೇಂದ್ರ, ಬೈರರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.