ADVERTISEMENT

ಡಿ.ಸಿ ಬಳಿ ಕ್ಷಮೆ ಯಾಚಿಸಿದ ಆರೋಪಿ

ತಹಶೀಲ್ದಾರ್‌ ಕೊಲೆ ಪ್ರಕರಣ: ಜೈಲಿನಲ್ಲಿ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 16:37 IST
Last Updated 14 ಜುಲೈ 2020, 16:37 IST

ಕೋಲಾರ: ಬಂಗಾರಪೇಟೆ ತಹಶೀಲ್ದಾರ್‌ ಚಂದ್ರಮೌಳೇಶ್ವರ ಕೊಲೆ ಪ್ರಕರಣದ ಆರೋಪಿ ವೆಂಕಟಾಚಲಪತಿಯು ಮಾನಸಿಕವಾಗಿ ಹಾಗೂ ದೈಹಿಕವಾಗಿ ಜರ್ಜರಿತವಾಗಿದ್ದು, ತನ್ನ ಕುಕೃತ್ಯಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರ ಬಳಿ ಕ್ಷಮೆ ಯಾಚಿಸಿದ್ದಾನೆ.

ಕೆಜಿಎಫ್‌ ಉಪ ಕಾರಾಗೃಹದ ಬ್ಯಾರಕ್‌ನಲ್ಲಿ ಮಂಗಳವಾರ ಆರೋಪಿಯನ್ನು ಭೇಟಿಯಾದ ಜಿಲ್ಲಾಧಿಕಾರಿಯು ಆತನಿಗೆ ಬುದ್ಧಿ ಮಾತು ಹೇಳಿದ್ದಾರೆ. ಈ ವೇಳೆ ಆರೋಪಿಯು, ‘ನನ್ನ ಜಮೀನು ಕೈ ಬಿಟ್ಟು ಹೋಗುತ್ತದೆ ಎಂಬ ಉದ್ವೇಗದಲ್ಲಿ ತಹಶೀಲ್ದಾರ್‌ಗೆ ಚಾಕುವಿನಿಂದ ಇರಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಅಮ್ಮ’ ಎಂದು ಜಿಲ್ಲಾಧಿಕಾರಿ ಬಳಿ ಅಂಗಲಾಚಿ ಕ್ಷಮೆ ಕೋರಿದ್ದಾನೆ ಎಂದು ಗೊತ್ತಾಗಿದೆ.

ವೆಂಕಟಾಚಲಪತಿ ಜತೆ ಸುಮಾರು ಅರ್ಧ ತಾಸು ಮಾತುಕತೆ ನಡೆಸಿದ ಜಿಲ್ಲಾಧಿಕಾರಿಯು ಆತನನ್ನು ಒಳಗೊಂಡಂತೆ ಕಾರಾಗೃಹದಲ್ಲಿನ ಇತರೆ ಎಲ್ಲಾ ಕೈದಿಗಳಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ನೀತಿಪಾಠ ಹೇಳಿದರು. ಅಲ್ಲದೇ, ಶಿಕ್ಷೆ ಪೂರ್ಣಗೊಳಿಸಿ ಜೈಲಿನಿಂದ ಬಿಡುಗಡೆಯಾದ ನಂತರ ಸತ್ಪ್ರಜೆಗಳಾಗಿ ಬಾಳುವಂತೆ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಆರೋಪಿ ವೆಂಕಟಾಚಲಪತಿ ಜೈಲಿಗೆ ಬಂದ ನಂತರ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ದಾನೆ. ಆತನ ದೇಹಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ’ ಎಂದು ಕಾರಾಗೃಹದ ಅಧಿಕಾರಿಗಳು ಹೇಳಿದ್ದಾರೆ.

‘ತಹಶೀಲ್ದಾರ್‌ ಕೊಲೆ ಪ್ರಕರಣದ ಆರೋಪಿ ವೆಂಕಟಾಚಲಪತಿಯನ್ನು ಜೈಲಿನಲ್ಲಿ ಭೇಟಿಯಾದೆ. ಆತ ಪಶ್ಚಾತ್ತಾಪ ಪಟ್ಟು ಕ್ಷಮೆ ಕೋರಿದ’ ಎಂದು ಸತ್ಯಭಾಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.