ADVERTISEMENT

ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ವಿರುದ್ಧ: ಸಿದ್ದರಾಮಯ್ಯ

ಜಾತಿವಾರು ಸಮೀಕ್ಷೆ ವರದಿ ಸ್ವೀಕಾರಕ್ಕೆ ಮೀನಮೇಷ: ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 15:04 IST
Last Updated 28 ಮಾರ್ಚ್ 2021, 15:04 IST
ಇತರೆ ಸಮುದಾಯಗಳನ್ನು ಹಿಂದುಳಿದ ವರ್ಗಗಳ 2ಎ ಮೀಸಲಾತಿ ಪಟ್ಟಿಗೆ ಸೇರಿಸದಂತೆ ಒತ್ತಾಯಿಸಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಕೋಲಾರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಂಡರು.
ಇತರೆ ಸಮುದಾಯಗಳನ್ನು ಹಿಂದುಳಿದ ವರ್ಗಗಳ 2ಎ ಮೀಸಲಾತಿ ಪಟ್ಟಿಗೆ ಸೇರಿಸದಂತೆ ಒತ್ತಾಯಿಸಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಕೋಲಾರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಂಡರು.   

ಕೋಲಾರ: ‘ಎಚ್‌.ಕಾಂತರಾಜ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿ ಸ್ವೀಕಾರಕ್ಕೆ ಮೀನಮೇಷ ಎಣಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇತರೆ ಸಮುದಾಯಗಳನ್ನು ಹಿಂದುಳಿದ ವರ್ಗಗಳ 2ಎ ಮೀಸಲಾತಿ ಪಟ್ಟಿಗೆ ಸೇರಿಸದಂತೆ ಒತ್ತಾಯಿಸಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ‘ಜಾತಿವಾರು ಸಮೀಕ್ಷೆಗೆ ಸುಮಾರು ₹ 162 ವೆಚ್ಚವಾಗಿದೆ. ಕಾಂತರಾಜ ಆಯೋಗವು 55 ಮಾನದಂಡ ಆಧರಿಸಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ’ ಎಂದರು.

‘ರಾಜ್ಯದಲ್ಲಿ 1931ರ ನಂತರ ಜಾತಿವಾರು ಸಮೀಕ್ಷೆ ನಡೆದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಜಾತಿವಾರು ಜನಗಣತಿಗೆ ಆದೇಶಿಸಿದೆ. ಸಮೀಕ್ಷೆ ಜವಾಬ್ದಾರಿಯನ್ನು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಲಾಗಿತ್ತು. ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಅವರು ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡುವಷ್ಟರಲ್ಲಿ ನನ್ನ ಅಧಿಕಾರಾವಧಿ ಮುಗಿದಿತ್ತು’ ಎಂದು ವಿವರಿಸಿದರು.

ADVERTISEMENT

‘2018ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಕಾಂತರಾಜ ಆಯೋಗದ ವರದಿ ಸ್ವೀಕರಿಸದಂತೆ ಆಗ ಹಿಂದುಳಿದ ವರ್ಗಗಳ ಕಲ್ಯಾಣಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ವರದಿ ಸ್ವೀಕಾರ ಆಗಲಿಲ್ಲ. ಈಗ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು ವರದಿ ಸ್ವೀಕಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಜಾತಿವಾರು ಸಮೀಕ್ಷೆ ವರದಿ ಬಗ್ಗೆ ಸಂಶಯಪಡುವ ಅಗತ್ಯವಿಲ್ಲ. ಈ ವರದಿ ಜಾರಿಯಾದರೆ ಯಾವುದೇ ಜಾತಿಗೆ ಅನ್ಯಾಯವಾಗಲ್ಲ. ಹೀಗಾಗಿ ತಕ್ಷಣವೇ ವರದಿ ಸ್ವೀಕರಿಸಿ 74 ವರ್ಷಗಳಿಂದ ಅನ್ಯಾಯಕ್ಕೆ ಒಳಗಾಗಿರುವ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ತುಟಿ ಬಿಚ್ಚುತ್ತಿಲ್ಲ: ‘ಯಡಿಯೂರಪ್ಪ ಅವರು ಜಾತಿವಾರು ಸಮೀಕ್ಷೆ ವರದಿ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ವರದಿ ಸ್ವೀಕರಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕೆಂದು ಪ್ರಭಾವಿ ಸಚಿವ ಈಶ್ವರಪ್ಪ ಅವರಿಗೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರು ಮನವಿ ಮಾಡಿದ್ದರು. ಆದರೆ, ಆ ಈಶ್ವರಪ್ಪ ಒಕ್ಕೂಟದ ಸದಸ್ಯರನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡೇ ಹೋಗಿಲ್ಲ. ಈಗ ಈಶ್ವರಪ್ಪ ಪ್ರಭಾವಿಯಲ್ಲ ಎಂಬುದು ಗೊತ್ತಾಯಿತು’ ಎಂದು ಲೇವಡಿ ಮಾಡಿದರು.

‘ಹಿಂದುಳಿದ ವರ್ಗಗಳು ತಮ್ಮ ಹಕ್ಕು ರಕ್ಷಣೆಗೆ ಪಕ್ಷಾತೀತವಾಗಿ ಹೋರಾಟ ನಡೆಸುತ್ತಿವೆ. ಸಮ ಸಮಾಜ ನಿರ್ಮಾಣ ಆಗಬೇಕು. ಇದನ್ನು ಸಂವಿಧಾನದಲ್ಲೇ ಒಪ್ಪಿಕೊಂಡಿದ್ದೇವೆ. ಅಧಿಕಾರ ಇರಲಿ ಅಥವಾ ಇಲ್ಲದಿರಲಿ ನಾನು ಸದಾ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ. ಇದರಲ್ಲಿ ರಾಜಿಯಿಲ್ಲ. ಹಿಂದುಳಿದ ವರ್ಗಗಳ ಹೋರಾಟ ಬಲಗೊಳ್ಳಬೇಕು. ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ವಿರೋಧವಿಲ್ಲ: ‘ಬೆಂಗಳೂರು ನಗರದಲ್ಲಿ ಶೇ 90ರಷ್ಟು ಜಾತಿವಾರು ಸಮೀಕ್ಷೆ ಆಗಿದೆ. ಉಳಿದೆಡೆ ಶೇ 100ರಷ್ಟು ಸಮೀಕ್ಷೆ ಆಗಿದೆ. ಜಾತಿವಾರು ಸಮೀಕ್ಷೆಯ ವರದಿಯನ್ನು ಜನರ ಮುಂದಿಡಬೇಕು. ಸಾಕಷ್ಟು ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಶೋಷಣೆಗೆ ಒಳಗಾಗಿರುವ ಎಲ್ಲಾ ಸಮುದಾಯಗಳಿಗೆ ಮೀಸಲಾತಿ ಸಿಗಬೇಕು’ ಎಂದರು

‘ಸಂವಿಧಾನದ ರೀತಿ ಅರ್ಹರಿಗೆ ಮೀಸಲಾತಿ ಸಿಗಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು. ಈ ನಿಟ್ಟಿನಲ್ಲಿ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕು’ ಎಂದು ಒತ್ತಾಯಿಸಿದರು.

ಶಾಸಕರಾದ ಕೆ.ಆರ್‌.ರಮೇಶ್‌ಕುಮಾರ್, ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ. ಎಂ.ರೂಪಕಲಾ, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮ್ಮದ್‌, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಎಂ.ರಾಮಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಚಂದ್ರಾರೆಡ್ಡಿ, ಉಪಾಧ್ಯಕ್ಷ ಎಲ್‌.ಎ.ಮಂಜುನಾಥ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.