ADVERTISEMENT

ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಿದ ಬಿಜೆಪಿ

ಸ್ಥಳೀಯ ಸಂಸ್ಥೆಗಳ ಅಧಿಕಾರ ಮೊಟಕು: ವಿಧಾನ ಪರಿಷತ್‌ ಮಾಜಿ ಸಭಾಪತಿ ಸುದರ್ಶನ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 14:46 IST
Last Updated 7 ಡಿಸೆಂಬರ್ 2021, 14:46 IST
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಭೆಯನ್ನು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಉದ್ಘಾಟಿಸಿದರು
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಭೆಯನ್ನು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಉದ್ಘಾಟಿಸಿದರು   

ಕೋಲಾರ: ‘ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿಗೂ ಅಧಿಕಾರಕ್ಕೆ ಬರುವ ಅವಕಾಶ ಸಿಕ್ಕಿದೆ. ಆದರೆ, ರಾಜ್ಯ ಸರ್ಕಾರ ಚುನಾವಣೆ ಮುಂದೂಡುವ ಮೂಲಕ ಅವರ ಅಧಿಕಾರ ಮೊಟಕುಗೊಳಿಸಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಕಿಡಿಕಾರಿದರು.

ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸದೆ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸರ್ಕಾರಗಳು ಆಡಳಿತ ವಿಕೇಂದ್ರೀಕರಣಕ್ಕೆ ಹೆಚ್ಚು ಕೊಟ್ಟವು. ಹಿಂದಿನ ಸರ್ಕಾರಗಳು ಎಂದಿಗೂ ಚುನಾವಣೆ ಮುಂದೂಡುವ ಕೆಲಸ ಮಾಡಲಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರವಧಿಯನ್ನು 5 ವರ್ಷಕ್ಕೆ ಹೆಚ್ಚಿಸಿದವು. ಜತೆಗೆ ಚುನಾವಣೆ ಮುಂದೂಡದಂತೆ ಕಾಯ್ದೆ ರೂಪಿಸಿದವು’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್‌ನಿಂದ ಮಾತ್ರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯ. ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಬಿಜೆಪಿ ಸರ್ಕಾರ ಯಾವುದೇ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿಲ್ಲ. ಆದರೆ, ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆ ಯೋಜನೆ ಸ್ಥಗಿತಗೊಳಿಸಿತು’ ಎಂದು ಶಾಸಕ ಕೃಷ್ಣಬೈರೇಗೌಡ ದೂರಿದರು.

‘ಅವಳಿ ಜಿಲ್ಲೆಯ ಮತದಾರರಿಗೆ ರೋಷವಿದ್ದರೆ ಬಿಜೆಪಿಗೆ ಏಕೆ ಮತ ಹಾಕಬೇಕೆಂದು ಪ್ರಶ್ನಿಸಬೇಕು. ಅವಳಿ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ವಿಫಲವಾಗಿರುವ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷವು ಟೀಕೆಯಲ್ಲೇ ಕಾಲ ಕಳೆದಿವೆ’ ಎಂದು ಲೇವಡಿ ಮಾಡಿದರು.

ಬಿಜೆಪಿಯದು ಅಡ್ಡದಾರಿ: ‘ಆಪರೇಷನ್ ಕಮಲದ ಮೂಲಕ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಪರಿಷತ್ತಿನಲ್ಲಿ ಬಹುಮತವಿಲ್ಲ. ಹೀಗಾಗಿ ಬಹುಮತ ಪಡೆಯಲು ಮತ್ತೆ ಅಡ್ಡದಾರಿ ಹುಡುಕುತ್ತಿದೆ. ಕಾಂಗ್ರೆಸ್ ಪಕ್ಷದೊಳಗಿನ ಕೆಲ ವ್ಯತ್ಯಾಸಗಳಿಂದ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ. ಮತ್ತೆ ಇದು ಮರುಕಳಿಸಬಾರದು’ ಎಂದು ಶಾಸಕ ಎಚ್.ಎನ್.ಶಿವಶಂಕರರೆಡ್ಡಿ ಕಿವಿಮಾತು ಹೇಳಿದರು.

‘ಕೋಲಾರ ಜಿಲ್ಲೆಯು ಕಾಂಗ್ರೆಸ್‌ನ ಭದ್ರ ಕೋಟೆ. ಈ ಚುನಾವಣೆಯು 2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತಿದ್ದು, ರಾಜಕೀಯವಾಗಿ ಬದಲಾವಣೆ ಬಯಸುತ್ತಿದ್ದಾರೆ’ ಎಂದರು.

‘ಬಿಜೆಪಿಯು ಗ್ರಾ.ಪಂ ಸದಸ್ಯರಿಗೆ ಬೆಲೆ ನಿಗದಿಪಡಿಸಿ ಜನಪ್ರತಿನಿಧಿಗಳನ್ನು ಕುರಿಗಳಂತೆ ಖರೀದಿಸುತ್ತಿದೆ. ಆಡಳಿತ ಪಕ್ಷವು ಹಣವಿದ್ದರೆ ಮಾತ್ರ ಚುನಾವಣೆ ಎಂಬ ಸನ್ನಿವೇಶ ಸೃಷ್ಟಿ ಮಾಡಿದೆ. ಮತದಾರರು ಯಾವುದೇ ಆಮಿಷಕ್ಕೆ ಬಲಿಯಾಗದೆ ಮತದಾನ ಮಾಡಬೇಕು. ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ಕುಮಾರ್‌ ಅವರಿಗೆ ಹಿಂದಿನ ಚುನಾವಣೆಯಲ್ಲಿ ಆದ ಅನ್ಯಾಯವನ್ನು ಈಗ ಸರಿಪಡಿಸಬೇಕು’ ಎಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮನವಿ ಮಾಡಿದರು.

ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ನಜೀರ್‌ ಅಹಮ್ಮದ್‌, ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸಚಿವ ನಿಸಾರ್ ಅಹಮ್ಮದ್‌, ಅಭ್ಯರ್ಥಿ ಎಂ.ಎಲ್‌.ಅನಿಲ್‌ಕುಮಾರ್, ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕರಾದ ಶ್ರೀಧರ್, ಅನಿಲ್ ಶರ್ಮ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.