ADVERTISEMENT

ಬೋನಸ್‌ ನೀಡಿಕೆ ಶ್ಲಾಘನೀಯ

ಕೋಚಿಮುಲ್‌ ನಿರ್ದೇಶಕ ಹರೀಶ್‌ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 12:20 IST
Last Updated 31 ಅಕ್ಟೋಬರ್ 2020, 12:20 IST
ಕೋಲಾರ ತಾಲ್ಲೂಕಿನ ಕಾಳಹಸ್ತಿಪುರದಲ್ಲಿ ಶನಿವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಸಾಮಾನ್ಯ ಸಭೆಯನ್ನು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಉದ್ಘಾಟಿಸಿದರು.
ಕೋಲಾರ ತಾಲ್ಲೂಕಿನ ಕಾಳಹಸ್ತಿಪುರದಲ್ಲಿ ಶನಿವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಸಾಮಾನ್ಯ ಸಭೆಯನ್ನು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಉದ್ಘಾಟಿಸಿದರು.   

ಕೋಲಾರ: ‘ಕಾಳಹಸ್ತಿಪುರ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಸಕ್ತ ವರ್ಷದಲ್ಲಿ ಹೆಚ್ಚು ಲಾಭ ಗಳಿಸಿ ಹಾಲು ಉತ್ಪಾದಕರಿಗೆ ಶೇ 3.65ರಷ್ಟು ಬೋನಸ್‌ ನೀಡುತ್ತಿರುವುದು ಶ್ಲಾಘನೀಯ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಾಳಹಸ್ತಿಪುರದಲ್ಲಿ ಶನಿವಾರ ನಡೆದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಸಂಘವು ಪ್ರಸಕ್ತ ಸಾಲಿನಲ್ಲಿ ಸುಮಾರು 40 ಲಕ್ಷ ಲೀಟರ್‌ ಹಾಲು ಖರೀದಿಸಿ ಶೇ 12ರಷ್ಟು ಲಾಭ ಗಳಿಸಿದೆ. ಇದರಲ್ಲಿ ಆಡಳಿತಾತ್ಮಕ ವೆಚ್ಚ ಕಳೆದು ಶೇ 7.75ರಷ್ಟು ನಿವ್ವಳ ಲಾಭ ಗಳಿಸಿದೆ’ ಎಂದು ಹೇಳಿದರು.

‘ಹಾಲು ಉತ್ಪಾದಕರು ಕೋಚಿಮುಲ್‌ನಿಂದ ದೊರೆಯುವ ಎಲ್ಲಾ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಕೋವಿಡ್‌–19 ಕಾರಣಕ್ಕೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕುಸಿದಿದೆ. ಹೀಗಾಗಿ ಹಾಲು ಖರೀದಿ ದರ ಇಳಿಕೆ ಮಾಡಲಾಗಿದೆ. ದರ ಇಳಿಕೆ ತಾತ್ಕಾಲಿಕವಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ದರ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

‘ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರು ಹೊಳಲಿ ಗ್ರಾಮದ ಬಳಿ ನೀಡಿದ 50 ಎಕರೆ ಜಮೀನಿನಲ್ಲಿ ಮೇವು ಮತ್ತು ಮೇವಿನ ಬೀಜ ಬೆಳೆಯಲಾಗುತ್ತದೆ. ಈಗಾಗಲೇ ಹೊಳಲಿ ಕೆರೆ ಕೋಡಿ ಹರಿದಿರುವುದರಿಂದ ಮೇವು ಬೆಳೆಯಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

‘ರೈತರು ತಪ್ಪದೇ ರಾಸುಗಳಿಗೆ ಗುಂಪು ವಿಮೆ ಮಾಡಿಸಬೇಕು. ಜಾನುವಾರುಗಳಿಗೆ ಕಾಲ ಕಾಲಕ್ಕೆ ಲಸಿಕೆ ಕೊಡಿಸಬೇಕು ಹಾಗೂ ಪಶು ಆಹಾರ ನೀಡಬೇಕು. ಒಕ್ಕೂಟದಿಂದ ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಹಾಲು ಕರೆಯುವ ಯಂತ್ರ, ಮೇವಿನ ಬೀಜ ನೀಡಲಾಗುತ್ತದೆ. ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ದರ ನೀಡಬೇಕು’ ಎಂದು ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಸೂಚಿಸಿದರು.

ಸಂಘದ ಅಧ್ಯಕ್ಷ ವಿಶ್ವನಾಥ, ಉಪಾಧ್ಯಕ್ಷ ಮೋಹನ್, ಕಾರ್ಯದರ್ಶಿ ಕೃಷ್ಣಪ್ಪ, ವಿಸ್ತರಣಾಧಿಕಾರಿಗಳಾದ ಎಸ್.ನಾಗಪ್ಪ, ಮಾರ್ಕಂಡಪ್ಪ ಹಾಗೂ ಹಾಲು ಉತ್ಪಾದಕರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.