ADVERTISEMENT

ಸರ್ಕಾರಕ್ಕೆ ಖಾಸಗೀಕರಣದ ಹುಚ್ಚು ಭ್ರಮೆ

ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಮೇಶ್‌ಕುಮಾರ್‌ ತೀವ್ರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 12:11 IST
Last Updated 10 ಏಪ್ರಿಲ್ 2021, 12:11 IST
ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಶ್ರೀನಿವಾಸಪುರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಶ್ರೀನಿವಾಸಪುರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.   

ಕೋಲಾರ: ‘ರಾಜ್ಯ ಸರ್ಕಾರದ ಪಂಚೇಂದ್ರಿಯಗಳು ಸ್ಥಗಿತಗೊಂಡಿದ್ದು, ಆಡಳಿತ ಯಂತ್ರ ಕ್ರಿಯಾಶೀಲವಾಗಿಲ್ಲ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಶ್ರೀನಿವಾಸಪುರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜನಪ್ರತಿನಿಧಿಗಳಿಗೆ ಅಧಿಕಾರ ಇರುವುದಿಲ್ಲ. ಬದಲಿಗೆ ಜವಾಬ್ದಾರಿ ಮಾತ್ರ ಇರುತ್ತದೆ. ನೀತಿ ನಿರೂಪಣೆ ಮಾಡುವ ಜನಪ್ರತಿನಿಧಿಗಳಿಗೆ ಹೃದಯವಂತಿಕೆ ಇರಬೇಕು’ ಎಂದು ಅಭಿಪ್ರಾಯಪಟ್ಟರು.

‘ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುವುದು ನೌಕರರ ಸಂಘಟನೆಗಳ ಹಕ್ಕು. ಇದನ್ನು ತಿಳಿದು ಸಂಯಮದಿಂದ ಸಮಸ್ಯೆ ಬಗೆಹರಿಸುವುದು ಸರ್ಕಾರದ ಜವಾಬ್ದಾರಿ. ಅಧಿಕಾರಿಗಳು ತಮಗೆ ಬೇಕಾದಂತೆ ಸಲಹೆ ಸೂಚನೆ ಕೊಡಬಹುದು. ಆದರೆ, ಜನಪ್ರತಿನಿಧಿಗಳು ಅಧಿಕಾರಸ್ಥರಲ್ಲ. ನಮಗೆ ಜವಾಬ್ದಾರಿ ಮತ್ತು ವಿನಯತೆ ಇರಬೇಕು’ ಎಂದರು.

ADVERTISEMENT

‘ಸಾರಿಗೆ ನೌಕರರ ಮುಷ್ಕರದ ವಿಚಾರದಲ್ಲಿ ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ. ಸಾರಿಗೆ ನೌಕರರು ಸಮಾಜದ ಭಾಗ. ಯುಗಾದಿ ಹಬ್ಬ ಬರುತ್ತಿದ್ದು, ಆ ನೌಕರರ ಕುಟುಂಬಗಳು ನರಳದಂತೆ ಸರ್ಕಾರ ಕ್ರಮ ವಹಿಸಬೇಕು. ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸದೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಸಲಹೆ ನೀಡಿದರು.

’ನೌಕರರ ಕುಟುಂಬ ಸದಸ್ಯರು ಸಹ ಯುಗಾದಿ ಹಬ್ಬ ಆಚರಿಸಬೇಕು. ದೂರದ ಊರುಗಳಲ್ಲಿರುವ ಮನೆಗಳಿಗೆ ತೆರಳಿ ಹಬ್ಬ ಆಚರಿಸುವ ಬಡವರಿದ್ದಾರೆ. ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಸಮಸ್ಯೆ ಬಗೆಹರಿಸಬೇಕು. ನೌಕರರ ಸಮಸ್ಯೆ ಕೇಳುವ ಅಂತಃಕರಣ ಸರ್ಕಾರಕ್ಕೆ ಇರಬೇಕು. ಎಸ್ಮಾ ಜಾರಿ ಮಾಡುವುದಾಗಿ ಹೇಳುತ್ತಾ ನೌಕರರನ್ನು ಬೆದರಿಸುವ ಪ್ರವೃತ್ತಿ ಬಿಡಬೇಕು’ ಎಂದು ಕಿವಿಮಾತು ಹೇಳಿದರು.

‘ಬೆಂಗಳೂರಿನಲ್ಲಿ ಖಾಸಗಿ ಬಸ್‌ಗಳು ಕಿಲೋಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿರುತ್ತವೆ. ಆ ಬಸ್‌ ಮಾಲೀಕರೆಲ್ಲಾ ನಷ್ಟ ಮಾಡಿಕೊಂಡು ಬಸ್ ಓಡಿಸುತ್ತಿಲ್ಲ. ಎಲ್ಲಾ ಕಡೆಗೆ ಖಾಸಗಿ ಬಸ್‌ ಸೇವೆ ಒದಗಿಸಲು ಸಾಧ್ಯವೇ? ಆಳುವ ಸರ್ಕಾರಗಳು ನಷ್ಟದ ಪರಿಸ್ಥಿತಿ ಸೃಷ್ಟಿ ಮಾಡಿ ಆ ನಷ್ಟವನ್ನು ನೌಕರರ ಮೇಲೆ ಹಾಕುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸಿದ್ದರಾಮಯ್ಯ ಸಿದ್ದರಾಮಯ್ಯನೇ. ಅವರಿಗೆ ಜನರ ಸಮಸ್ಯೆಗೆ ಸ್ಪಂದಿಸುವ ಹೃದಯವಂತಿಕೆಯಿದೆ. ಜನಪರವಾಗಿ ಆಡಳಿತ ನಡೆಸುವುದನ್ನು ಅವರಿಂದ ಕಲಿಯಬೇಕು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರೀಕರಣದಿಂದ ಮಾತ್ರ ಜನರ ಅಭಿವೃದ್ಧಿ ಸಾಧ್ಯ. ಆದರೆ, ಸರ್ಕಾರ ಖಾಸಗೀಕರಣದ ಹುಚ್ಚು ಭ್ರಮೆಯಲ್ಲಿದೆ’ ಎಂದು ಟೀಕಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಶ್ರೀನಿವಾಸಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್, ಜಿ.ಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌, ತಾ.ಪಂ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್, ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.