ADVERTISEMENT

ಯುವ ಪೀಳಿಗೆಯಲ್ಲಿ ಓದುವ ಹವ್ಯಾಸ ಕ್ಷೀಣ

ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ನಟರಾಜ್‌ ಕಳವಳ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 16:56 IST
Last Updated 24 ಅಕ್ಟೋಬರ್ 2020, 16:56 IST
ಕೋಲಾರದಲ್ಲಿ ಶನಿವಾರ ನಡೆದ ‘ಓದುಗ ಕೇಳುಗ ನಮ್ಮ ನಡೆ’ ಕಾರ್ಯಕ್ರಮದಲ್ಲಿ ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್‌ ಮಾತನಾಡಿದರು.
ಕೋಲಾರದಲ್ಲಿ ಶನಿವಾರ ನಡೆದ ‘ಓದುಗ ಕೇಳುಗ ನಮ್ಮ ನಡೆ’ ಕಾರ್ಯಕ್ರಮದಲ್ಲಿ ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್‌ ಮಾತನಾಡಿದರು.   

ಕೋಲಾರ: ‘ಮೊಬೈಲ್‌, ಕಂಪ್ಯೂಟರ್‌ ಹಾಗೂ ಸಾಮಾಜಿಕ ಜಾಲತಾಣಗಳ ದಾಸರಾಗಿರುವ ಯುವಕ ಯುವತಿಯರಲ್ಲಿ ಓದುವ ಹವ್ಯಾಸ ಕ್ಷೀಣಿಸಿದೆ’ ಎಂದು ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್‌ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ನಡೆದ ‘ಓದುಗ ಕೇಳುಗ- ನಮ್ಮ ನಡೆ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮೊಬೈಲ್‌ ಮತ್ತು ಇಂಟರ್‌ನೆಟ್‌ನಿಂದ ಅನುಕೂಲ ಇರುವಂತೆಯೇ ಅನಾನುಕೂಲವೂ ಇದೆ. ಯುವಕ ಯುವತಿಯರು ಮೊಬೈಲ್‌ ಹಾಗೂ ಇಂಟರ್‌ನೆಟ್‌ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬದಲಾವಣೆಯ ಕಾಲಘಟ್ಟದಲ್ಲಿ ಯಾವುದು ಶಾಶ್ವತವಲ್ಲ’ ಎಂದರು.

‘ಮಕ್ಕಳಲ್ಲಿ ಮಾನವೀಯ ಮೌಲ್ಯ ರೂಢಿಸುವ ಜತೆಗೆ ಮುಕ್ತ ಮನಸ್ಸಿನಿಂದ ಓದುವ ಮನಸ್ಥಿತಿ ಬೆಳೆಸಬೇಕು. ಅಜ್ಞಾನ ತೊಲಗಿಸಿ ಜ್ಞಾನ ಸಂಪಾದಿಸಲು ಪುಸ್ತಕಗಳನ್ನು ಓದುವಂತಾಗಬೇಕು. ಸಮಾಜದಲ್ಲಿ ಯಾವುದೇ ವಿಷಯವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಓದು ಬದುಕಿನ ಅಂಧಕಾರ ತೊಲಗಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಬದಲಾವಣೆ ಹಾಗೂ ಚಲನಶೀಲತೆಯು ಜಗದ ನಿಯಮ. ಮನುಷ್ಯ ಬದಲಾಗದಿದ್ದರೆ ಮಾನಸಿಕ ವಿಕಸನ ಸಾಧ್ಯವಿಲ್ಲ. ಯುವಕ ಯುವತಿಯರು ಅಧ್ಯಯನದತ್ತ ಮನಸ್ಸು ಕೇಂದ್ರೀಕರಿಸಿ ಸ್ವಂತ ಆಲೋಚನೆ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸವಾಲು ಮೆಟ್ಟಿ ನಿಲ್ಲಿ: ‘ಯುವಕ ಯುವತಿಯರಿಗೆ ಸಮಾಜದಲ್ಲಿನ ಸರಿ, ತಪ್ಪುಗಳನ್ನು ಅರ್ಥ ಮಾಡಿಸಿ ಸರಿ ದಾರಿಗೆ ತರುವ ಕೆಲಸ ಆಗಬೇಕು. ಭಯದ ವಾತಾವರಣದಲ್ಲಿರುವ ಸಾಹಿತ್ಯಾಸಕ್ತರು ಓದಿನ ಮೂಲಕ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಪರಿವರ್ತನೆ ಮತ್ತು ಹೊಸ ಆಲೋಚನೆಯು ಓದಿನ ಮುಖ್ಯ ಉದ್ದೇಶಗಳಾಗಿವೆ’ ಎಂದು ಜಿಲ್ಲಾ ಕನ್ನಡ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.

‘ಕೊರೊನಾ ಸಂದರ್ಭದಲ್ಲಿ ಸಾಹಿತ್ಯ ಕೃಷಿ ಅಡೆತಡೆಯಿಲ್ಲದೆ ಸಾಗಿದೆ. ಬರವಣಿಗೆ ಮತ್ತು ಓದು ನಿರಂತರ ಪ್ರಕ್ರಿಯೆಯಾಗಬೇಕು. ಓದಿನಿಂದ ಆಲೋಚನಾ ಲಹರಿ ಬದಲಾಗುತ್ತದೆ’ ಎಂದು ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಅಭಿಪ್ರಾಯಪಟ್ಟರು.

ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್‌, ಸಾಹಿತಿ ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.