ADVERTISEMENT

ಮಕ್ಕಳ ಸಾವು: ರೈಲ್ವೆ ಇಲಾಖೆಗೆ ಮುತ್ತಿಗೆ

ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 4:31 IST
Last Updated 13 ಅಕ್ಟೋಬರ್ 2020, 4:31 IST
ಬಂಗಾರಪೇಟೆಯಲ್ಲಿ ಈಚೆಗೆ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಸಂಬಂಧಿಕರು ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರೈಲ್ವೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು
ಬಂಗಾರಪೇಟೆಯಲ್ಲಿ ಈಚೆಗೆ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಸಂಬಂಧಿಕರು ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರೈಲ್ವೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು   

ಬಂಗಾರಪೇಟೆ: ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ ₹1 ಕೋಟಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಸಂಬಂಧಿಕರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರೈಲ್ವೆ ಇಲಾಖೆ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟಿಸಿದರು.

ಪಟ್ಟಣದ ಕುಂಬಾರಪಾಳ್ಯದ ಬಳಿ ಇರುವ ಕೆಳಸೇತುವೆ ನೀರನ್ನು ಹೊರಗೆ ಹರಿಸಲು ಆಳವಾದ ಕಾಲುವೆ ತೋಡಿದ್ದು, ಯಾವುದೇ ಸುರಕ್ಷಾ ಕ್ರಮ ಕೈಗೊಳ್ಳದ ಕಾರಣ ಮಕ್ಕಳು ನೀರು ತುಂಬಿದ್ದ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರೇ ಘಟನೆಗೆ ನೇರ ಹೊಣೆ ಎಂದು ಆರೋಪಿಸಿ, ಪ್ರತಿಭಟನಾಕಾರರು ರೈಲ್ವೆ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದರು.

ಘಟನೆ ನಡೆದು 24 ಗಂಟೆಯಾದರೂ ರೈಲ್ವೆ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಕೇಳಿದರೆ ಘಟನೆ ಬಗ್ಗೆ ಮಾಹಿತಿಯೇ ಇಲ್ಲ ಎನ್ನುವಂತೆ ನಟಿಸುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಕಾಳಜಿ ವಹಿಸಿಲ್ಲ ಏಕೆ? ಎಂದು ರಾಜ್ಯ ಘಟಕ ಉಪಾಧ್ಯಕ್ಷ ನಾರಾಯಣಗೌಡ ಪ್ರಶ್ನಿಸಿದರು.

ADVERTISEMENT

ಜಿಲ್ಲೆಯಾದ್ಯಂತ ಅವೈಜ್ಞಾನಿಕವಾಗಿ ರೈಲ್ವೆ ಕೆಳ ಸೇತುವೆಗಳನ್ನು ನಿರ್ಮಿಸ
ಲಾಗಿದೆ. ಪಟ್ಟಣದ ಕುಂಬಾರಪಾಳ್ಯದ ಬಳಿ ಕೆಳ ಸೇತುವೆ ನೀರು ಹರಿಸಲು ತೋಡಿರುವ ಕಾಲುವೆ ಎರಡೂ ಬದಿಯಲ್ಲಿ ಗಿಡಗಳು ಬೆಳೆದಿವೆ. ಜಾನುವಾರುಗಳು ಕಾಲುವೆಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸಂಭವವಿದೆ. ಮತ್ತೊಮ್ಮೆ ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ರೈಲ್ವೆ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಹಲವೆಡೆ ಕಳಪೆ ಕಾಮಗಾರಿ ನಡೆಸಿ, ಜನರ ಜೀವನದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಅಲ್ಲದೆ ಕೋಟಿಗಟ್ಟಲೆ ಲೂಟಿ ಹೊಡೆದಿದ್ದಾರೆ. ವಿಶೇಷ ತಂಡ ರಚಿಸಿ ಪರಿಶೀಲನೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಗೌರವ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್, ಮಹಿಳಾ ಅಧ್ಯಕ್ಷೆ ನಳನಿಗೌಡ, ರಾಜ್ಯ ಸಂಚಾಲಕ ನಾಗರಾಜ ಗೌಡ, ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಸ್ವಸ್ತಿಕ್ ಶಿವು, ಅಂಬರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.