ADVERTISEMENT

‘ಸ್ವಾರ್ಥಕ್ಕೆ ದಾರಿ ತಪ್ಪಿದ ಹೋರಾಟ’

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುನಿವೆಂಕಟಪ್ಪ ಮಾರ್ಮಿಕ ನುಡಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 15:06 IST
Last Updated 28 ಜನವರಿ 2021, 15:06 IST
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ನಡೆದ ಸಂವಾದದಲ್ಲಿ ಸಮ್ಮೇಳನಾಧ್ಯಕ್ಷ ವಿ.ಮುನಿವೆಂಕಟಪ್ಪ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ನಡೆದ ಸಂವಾದದಲ್ಲಿ ಸಮ್ಮೇಳನಾಧ್ಯಕ್ಷ ವಿ.ಮುನಿವೆಂಕಟಪ್ಪ ಮಾತನಾಡಿದರು.   

ಕೋಲಾರ: ‘ಸಮಾಜದ ಸ್ವಾಸ್ಥ್ಯ ಕೆಟ್ಟಿದ್ದು, ಪ್ರತಿನಿತ್ಯ ಅಶಾಂತಿ ನೋಡುತ್ತಿದ್ದೇವೆ. ಈ ವಿಷಮ ಸ್ಥಿತಿಗೆ ನಾವೇ ಕಾರಣರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಿ.ಮುನಿವೆಂಕಟಪ್ಪ ಮಾರ್ಮಿಕವಾಗಿ ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ಸಂವಾದದಲ್ಲಿ ಮಾತನಾಡಿ, ‘5 ಶಕ್ತಿಗಳು ಇಡೀ ಸಮಾಜವನ್ನು ನಿಯಂತ್ರಿಸುತ್ತಿವೆ. ಪುರೋಹಿತಶಾಹಿ, ಅಧಿಕಾರಶಾಹಿ, ರಾಜಕೀಯಶಾಹಿ, ಬಂಡವಾಳಶಾಹಿ ಹಾಗೂ ಭೂಒಡೆಯರ ಹಿಡಿತದಲ್ಲಿ ಇಡೀ ವ್ಯವಸ್ಥೆ ಒದ್ದಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜಕೀಯಶಾಹಿಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಅದನ್ನು ನಾವು ಸರಿಯಾಗಿ ವಿವೇಚಿಸಿ ತಿಳಿದುಕೊಳ್ಳಬೇಕು. ಇಂದಿನ ಈ ಸ್ಥಿತಿಗೆ ನಾವೆಲ್ಲಾ ಕಾರಣರು. ಹಿಂದೆ ಸರ್ಕಾರಗಳು ಹೋರಾಟಗಾರರನ್ನು ನೋಡಿ ಹೆದರಿಕೊಳ್ಳುತ್ತಿದ್ದವು, ಚಳವಳಿಗೆ ಬೆಲೆಯಿತ್ತು. ಆದರೆ, ಈಗ ಸ್ವಾರ್ಥಕ್ಕೆ ಹಾಗೂ ಸ್ವಂತ ಜೀವನಕ್ಕೆ ಹೋರಾಟಗಳು ದಾರಿ ತಪ್ಪಿದ್ದರಿಂದ ಈ ದುಸ್ಥಿತಿ ಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ. ನಾವೇ ಅಧಿಕಾರಕ್ಕೆ ತಂದಿರುವ ಸರ್ಕಾರಗಳು ನಮ್ಮನ್ನು ಹೇಗೆ ನಡೆಸಿಕೊಳ್ಳಬಲ್ಲವು ಎಂಬ ಮುಂದಾಲೋಚನೆ ಮತ್ತು ಜವಾಬ್ದಾರಿ ಇರಬೇಕು. ಈ ಎಚ್ಚರ ತಪ್ಪಿದಾಗ ಪ್ರಜಾಪ್ರಭುತ್ವದ ವಿರುದ್ಧದ ಸನ್ನಿವೇಶ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವವು ಮತದಾನದ ಹಕ್ಕು ನೀಡಿದೆ. ನಾವು ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಆಲೋಚಿಸಬೇಕು. ವ್ಯವಸ್ಥೆಯಲ್ಲಿ ನಾವೇ ಮೆಚ್ಚಿಕೊಂಡು ಅಧಿಕಾರ ಕೊಟ್ಟಿದ್ದೇವೆ. ನಾವು ಯೋಚನೆ ಮಾಡದೆಯೇ ಅವರಿಗೆ ಅಧಿಕಾರ ಕೊಟ್ಟು ಆಳುವವರನ್ನು ನಿಂದಿಸುವಂತಾಗಿದೆ’ ಎಂದರು.

ದಲಿತ ಪದ: ‘ಅಂಬೇಡ್ಕರ್ ಎಲ್ಲಿಯೂ ದಲಿತ ಎಂಬ ಪದ ಬಳಕೆ ಮಾಡಿರಲಿಲ್ಲ. ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ದಲಿತ ಪದ ಬಳಸದೆ ಬಹುಜನ ಎಂಬ ಪದ ಬಳಕೆ ಮಾಡಿ ಆ ಜನಾಂಗ ಅನುಭವಿಸುತ್ತಿರುವ ಶೋಷಣೆಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಆದರೆ, ಅವರ ಅನುಯಾಯಿಗಳು ದಲಿತ ಎಂಬ ಪದ ಹುಟ್ಟು ಹಾಕಿದರು. ಆದರೆ, ಮಹಾರಾಷ್ಟ್ರ ಹೈಕೋರ್ಟ್‌ ದಲಿತ ಎಂಬ ಪದವನ್ನು ರದ್ದುಪಡಿಸಿ ಅದನ್ನು ಬಳಸದಂತೆ ಎಚ್ಚರಿಕೆ ನೀಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.