ADVERTISEMENT

ಡಿ.11ಕ್ಕೆ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 13:26 IST
Last Updated 29 ನವೆಂಬರ್ 2019, 13:26 IST
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಶುಕ್ರವಾರ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ ಕುರಿತು ಸಮನ್ವಯ ಸಮಿತಿ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಶುಕ್ರವಾರ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ ಕುರಿತು ಸಮನ್ವಯ ಸಮಿತಿ ಸಭೆ ನಡೆಸಿದರು.   

ಕೋಲಾರ: ‘ಜಿಲ್ಲೆಯಲ್ಲಿ ಡಿ.11ರಿಂದ ಡಿ.31ರವರೆಗೆ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ ಕುರಿತು ಇಲ್ಲಿ ಶುಕ್ರವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ‘1 ಮತ್ತು 5ನೇ ತರಗತಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗುತ್ತದೆ. ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು’ ಎಂದು ಸೂಚಿಸಿದರು.

‘ಲಸಿಕೆ ಕಾರ್ಯಕ್ರಮದಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಬೇಕು. ಲಸಿಕೆ ಕುರಿತು ಸಾರ್ವಜನಿಕರಿಗೆ ಮತ್ತು ಪೋಷಕರಿಗೆ ಅರಿವು ಮೂಡಿಸಿ, ಆತಂಕ ದೂರ ಮಾಡಬೇಕು. ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು’ ಎಂದು ಹೇಳಿದರು.

ADVERTISEMENT

‘ಒಂದನೇ ತರಗತಿ ಮಕ್ಕಳಿಗೆ ಡಿಪಿಟಿ ಚಿಕಿತ್ಸೆ, 5ನೇ ತರಗತಿ ಮತ್ತು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಟಿ.ಡಿ ಲಸಿಕೆ ನೀಡಲಾಗುವುದು. ಎಲ್ಲಾ ಸರ್ಕಾರಿ ಅನುದಾನಿತ ಖಾಸಗಿ ಶಾಲೆಗಳು ಸೇರಿದಂತೆ ಮದರಸ, ಕೇಂದ್ರೀಯ ವಿದ್ಯಾಲಯ ಮತ್ತು ವಸತಿ ಶಾಲಾ ಮಕ್ಕಳಿಗೆ ಲಸಿಕೆ ನೀಡಲಾಗುವುದು’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ ವಿವರಿಸಿದರು.

‘ಲಸಿಕೆ ನೀಡುವುದರಿಂದ ಗಂಟಲು ಮಾರಿ, ಡಿಫ್ತಿರಿಯಾ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗ ತಡೆಗಟ್ಟಬಹುದು. ಜಿಲ್ಲೆಯಲ್ಲಿ 62 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿಯಿದೆ. ಪೋಷಕರು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್‌.ವಿ.ದರ್ಶನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಕಮಲಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.