ADVERTISEMENT

ಕೋಲಾರ: 9 ಕಡೆ ಕನ್ನ, ₹ 52 ಲಕ್ಷದ ಒಡವೆ ಕಳ್ಳತನ!

ಆರೋಪಿ ಬಂಧನ; 557 ಗ್ರಾಂ ಚಿನ್ನ, ಎರಡೂವರೆ ಕೆ.ಜಿ ಬೆಳ್ಳಿ ವಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 14:18 IST
Last Updated 23 ಏಪ್ರಿಲ್ 2025, 14:18 IST
ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸಮ್ಮುಖದಲ್ಲಿ ಆರೋಪಿ ಹಾಗೂ ಆತನಿಂದ ವಶಪಡಿಸಿಕೊಂಡಿರುವ ಚಿನ್ನ, ಬೆಳ್ಳಿ ಆಭರಣವನ್ನು ಪ್ರದರ್ಶಿಸಲಾಯಿತು
ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸಮ್ಮುಖದಲ್ಲಿ ಆರೋಪಿ ಹಾಗೂ ಆತನಿಂದ ವಶಪಡಿಸಿಕೊಂಡಿರುವ ಚಿನ್ನ, ಬೆಳ್ಳಿ ಆಭರಣವನ್ನು ಪ್ರದರ್ಶಿಸಲಾಯಿತು   

ಕೋಲಾರ: ಮುಳಬಾಗಿಲು ನಗರ ಹಾಗೂ ಕೋಲಾರ ಗ್ರಾಮಾಂತರ ಸೇರಿದಂತೆ ಒಂಬತ್ತು ಕಡೆ ವಿವಿಧ ಸಂದರ್ಭಗಳಲ್ಲಿ ಕನ್ನ ಹಾಕಿ ಚಿನ್ನ ಹಾಗೂ ಬೆಳ್ಳಿ ಕದ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ ಬಳಿಯ ಇಲಿಯಾಸ್‌ ನಗರದ ನಿವಾಸಿ ಸೈಯದ್‌ ಅಫ್ಸರ್‌ (37) ಬಂಧಿತ ಆರೋಪಿ. ಆತನಿಂದ 557 ಗ್ರಾಂ ಚಿನ್ನ, ಎರಡೂವರೆ ಕೆ.ಜಿ ಬೆಳ್ಳಿ ಸೇರಿದಂತೆ ಸುಮಾರು ₹ 52.63 ಲಕ್ಷ ಮೌಲ್ಯದ ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಳಬಾಗಿಲು ನಗರದ ಮಂಜುನಾಥ್‌ ಕಾಲೊನಿಯ ಸೋಮಶೇಖರಪ್ಪ ಎಂಬುವರ ನಿವಾಸದಲ್ಲಿ ಏ.4ರಂದು ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಚಿನ್ನ ಕದ್ದಿರುವ ದೂರಿನ ಸಂಬಂಧ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಪೊಲೀಸರ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿ ಸೈಯದ್‌ ಅಫ್ಸರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಗೊತ್ತಾಗಿದೆ.

‘ಕಳ್ಳತನ ಮಾಡಿರುವ ಬಗ್ಗೆ ಆರೋಪಿ ಅಫ್ಸರ್‌ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಮುಳಬಾಗಿಲು ನಗರದಲ್ಲಿ ಏಳು ಕಡೆ, ನಂಗಲಿಯಲ್ಲಿ ಒಂದು ಕಡೆ ಹಾಗೂ ಕೋಲಾರ ಗ್ರಾಮಾಂತರದಲ್ಲಿ ಒಂದು ಕಡೆ ಸೇರಿ ಒಟ್ಟು 9 ಕಡೆ ಮನೆ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಎಲ್ಲಾ ಪ್ರಕರಣಗಳಲ್ಲಿ ಕಳ್ಳತನವಾಗಿ ಚಿನ್ನ ಹಾಗೂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರವಿಶಂಕರ್‌, ಎಚ್‌.ಸಿ.ಜಗದೀಶ್‌, ಮುಳಬಾಗಿಲು ಉಪವಿಭಾಗದ ಡಿವೈಎಸ್ಪಿ ನಂದಕುಮಾರ್ ನೇತೃತ್ವದಲ್ಲಿ ಮುಳಬಾಗಿಲು ನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಜಣ್ಣ, ಪಿಎಸ್‌ಐ ಅಣ್ಣಯ್ಯ, ಸಿಬ್ಬಂದಿ ಪ್ರಭು, ಆಂಜಿನಪ್ಪ, ರಾಘವೇಂದ್ರ, ಚನ್ನಪ್ಪ, ಮಧು, ವೆಂಕಟರಾಘವನ್‌, ಸುಬ್ರಮಣಿ, ಸತೀಶ್‌ ಬಾಬು, ಕೆ.ಸತೀಶ್‌, ವಿಶ್ವನಾಥ್‌, ಪ್ರಶಾಂತ್‌, ನವೀನ್‌, ತಾಂತ್ರಿಕ ವಿಭಾಗದ ಮುರಳಿ ಹಾಗೂ ಶ್ರೀನಾಥ್‌ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು. ವಿಶೇಷ ತಂಡದ ಕಾರ್ಯಾಚರಣೆಯನ್ನು ಎಸ್‌ಪಿ ನಿಖಿಲ್‌ ಶ್ಲಾಘಿಸಿದ್ದಾರೆ.

ನಂಗಲಿಯಲ್ಲಿ ಕಳ್ಳತನ ಸೆರೆ

ನಂಗಲಿ ಬಳಿಯ ಬೈರಕೂರು ಗ್ರಾಮದ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮುಳಬಾಗಿಲು ತಾಲ್ಲೂಕಿನ ಎನ್‌.ಕುರಬರಹಳ್ಳಿ ಗ್ರಾಮದ ಹರೀಶ್‌ (34) ಬಂಧಿತ ಆರೋಪಿ. ಆತನಿಂದ ₹ 1.25 ಲಕ್ಷ ಮೌಲ್ಯದ ಚಿನ್ನದ ಒಡವೆ ಹಾಗೂ ₹ 2.50 ಲಕ್ಷ ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ‘ಆರೋಪಿಯು ಗ್ರಾಮದ ಸಂತರಾಂ ಎಂಬುವರ ಮನೆ ಬಾಗಿಲು ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ ಒಂದು ಚಿನ್ನದ ಸರ 33 ಚಿನ್ನದ ಗುಂಡುಗಳನ್ನು ಕಳ್ಳತನ ಮಾಡಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆಡೆ ಆರು ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ವಿಚಾರ ಗೊತ್ತಾಯಿತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು. ನಿಖಿಲ್‌ ಮಾರ್ಗದರ್ಶನದಲ್ಲಿ ಮುಳಬಾಗಿಲು ಗ್ರಾಮಾಂತರ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಸತೀಶ್‌ ನೇತೃತ್ವದಲ್ಲಿ ಪಿಎಸ್‌ಐ ಅರ್ಜುನ್‌ ಗೌಡ ನಂಗಲಿ ಠಾಣೆ ಸಿಬ್ಬಂದಿ ಸುರೇಶ್‌ ಪವನ್‌ ಕಾರ್ಯಾಚರಣೆ ನಡೆಸಿದ್ದರು. ಇವರ ಕೆಲಸಕ್ಕೆ ನಿಖಿಲ್‌ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.