ADVERTISEMENT

ತೊಪ್ಪನಹಳ್ಳಿಗೆ ಭವ್ಯ ಗ್ರಾಮ ಪಂಚಾಯಿತಿ ಕಟ್ಟಡ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 8:13 IST
Last Updated 27 ಏಪ್ರಿಲ್ 2025, 8:13 IST
ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿಯ ಕಟ್ಟಡದ ಹೊರನೋಟ
ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿಯ ಕಟ್ಟಡದ ಹೊರನೋಟ   

ಬಂಗಾರಪೇಟೆ: ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮ ಈಗ ಸುಸಜ್ಜಿತವಾದ ಹಾಗೂ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುವ ಭವ್ಯವಾದ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ಹೊಂದಿರುವ ಖುಷಿಯಲ್ಲಿದೆ.

ಎರಡು ಅಂತಸ್ತಿನ ಈ ಕಟ್ಟಡದಲ್ಲಿ, ನೆಲಮಹಡಿಯನ್ನು ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕೊಠಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ, ಗಣಕಯಂತ್ರ ನಿರ್ವಾಹಕರು, ಕರವಸೂಲಿಗಾರರು ಹಾಗೂ ಕಾಯಕ ಮಿತ್ರರಿಗೆ ಪ್ರತ್ಯೇಕವಾಗಿ ಕೊಠಡಿಗಳನ್ನು ನೀಡಲಾಗಿದೆ. ಬಾಪೂಜಿ ಸೇವಾ ಕೇಂದ್ರ ಶೌಚಾಲಯವನ್ನೂ ನಿರ್ಮಿಸಲಾಗಿದೆ.

ಮೊದಲನೇ ಮಹಡಿಯನ್ನು ಎಂಆರ್‌ಎಂಎಲ್ ಅಡಿಯಲ್ಲಿ ಬರುವ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಹಿತದೃಷ್ಟಿಯಿಂದ ₹17 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಸಭಾಂಗಣ ಸೇರಿ ಹಲವು ಕೊಠಡಿಗಳನ್ನು ನಿರ್ಮಿಸಲಾಗಿದೆ.

ADVERTISEMENT

ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಅಗತ್ಯವಿರುವ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸಲು ಸಹಕಾರಿಯಾಗುವಂತೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ಮತ್ತು ಸಾಮಾನ್ಯ ಸಭೆಗಳನ್ನು ನಡೆಸಲು ಸಭಾಂಗಣವನ್ನು ನಿರ್ಮಾಣ ಮಾಡಿದ್ದು, ಇದು ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲಿಯೇ ಮಾದರಿ ಕಟ್ಟಡವಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ₹15 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿಗೆ ಅಗತ್ಯವಿರುವ ಎಲ್ಲಾ ಪೀಠೋಪಕರಣಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಇದು ಕಚೇರಿ ಮೆರುಗು ಹೆಚ್ಚಿಸಿದೆ.

ಗ್ರಾಮ ಪಂಚಾಯಿತಿ ಕಟ್ಟಡವು ಶಿಥಿಲಗೊಂಡಿದ್ದು ಮಳೆ ಬಂದರೆ ಸೋರುತ್ತಿತ್ತು, ಗಡಿ ಭಾಗದಲ್ಲಿ ಗ್ರಾಮಗಳ ಅಭಿವೃದ್ಧಿ ಹಿತದೃಷ್ಟಿಯಿಂದ ಸುಂದರವಾದ ಗ್ರಾಮ ಪಂಚಾಯಿತಿ ಕಟ್ಟಡದ ಅಗತ್ಯವಿತ್ತು. ಗ್ರಾಮ ಪಂಚಾಯಿತಿ ನೂತನ ಕಾರ್ಯಾಲಯ ಜನರಲ್ಲಿಯೂ ಖುಷಿ ಹೆಚ್ಚಿಸಿದೆ
ಪ್ರಭಾಕರ್ ರೆಡ್ಡಿ, ಗ್ರಾ.ಪಂ ಅಧ್ಯಕ್ಷ 
ಗ್ರಾಮ ಪಂಚಾಯಿತಿ ಕಚೇರಿಯ ಹಳೇ ಕಟ್ಟಡ ಶಿಥಿಲಗೊಂಡಿತ್ತು. ಸಭೆಗಳನ್ನು ಮಾಡಲು ಸ್ಥಳಾವಕಾಶವಿಲ್ಲದೆ ತೊಂದರೆಯಾಗುತ್ತಿತ್ತು. ಆದರಿಂದ ಎಲ್ಲಾ ಸದಸ್ಯರು ತೀರ್ಮಾನಿಸಿ ಸುಂದರವಾದ ಕಟ್ಟಡವನ್ನು ನಿರ್ಮಾಣದ ಕನಸನ್ನು ನನಸು ಮಾಡಲಾಗಿದೆ
ಎಚ್‌. ಮಧುಚಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಗ್ರಾಮ ಪಂಚಾಯಿತಿ ಕಾರ್ಯಾಲಯ ಸಭಾಂಗಣದಲ್ಲಿ ಅಳವಡಿಸಿರುವ ಪೀಠೋಪಕರಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.