ಕೋಲಾರ: ‘ರಾಜ್ಯ ಮತ್ತು ದೇಶದಲ್ಲಿ ಲಾಕ್‌ಡೌನ್ ಇರುವುದರಿಂದ ಟೊಮೊಟೊ ಬೆಲೆಯಲ್ಲಿ ಏರುಪೇರಾಗಿದ್ದು, ಬೆಲೆ ಕುಸಿತ ತಾತ್ಕಾಲಿಕ’ ಎಂದು ಎಪಿಎಂಸಿ ಅಧ್ಯಕ್ಷ ಕೆ.ಮಂಜುನಾಥ್ ಅಭಿಪ್ರಾಯಪಟ್ಟರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಶನಿವಾರ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿ, ‘ಟೊಮೆಟೊ ಬೆಲೆ ಕುಸಿತಕ್ಕೆ ರೈತರು ಧೃತಿಗೆಡಬಾರದು. ಕೋವಿಡ್ ನಿಯಂತ್ರಣಕ್ಕೆ ಬಂದು ಲಾಕ್‌ಡೌನ್ ಅಂತ್ಯಗೊಂಡರೆ ಖಂಡಿತ ಬೆಲೆ ಏರಿಕೆಯಾಗುತ್ತದೆ’ ಎಂದು ಕಿವಿಮಾತು ಹೇಳಿದರು.
‘ಲಾಕ್‌ಡೌನ್ ಕಾರಣಕ್ಕೆ ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿರುವುದರಿಂದ ಮತ್ತು ಹೊರ ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಿದೆ. ಸರಕು ಸಾಗಣೆ ಸೇವೆ ಸಹಜ ಸ್ಥಿತಿಗೆ ಮರಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ರೈತರು ಮಾರುಕಟ್ಟೆಗೆ ಗುಣಮಟ್ಟದ ಟೊಮೆಟೊ ತರಬೇಕು. ಈ ಬಗ್ಗೆ ದಲ್ಲಾಳಿಗಳು, ಮಂಡಿ ಮಾಲೀಕರು ರೈತರಿಗೆ ಅರಿವು ಮೂಡಿಸಬೇಕು. ಕಳಪೆ ಟೊಮೆಟೊ ಮಾರುಕಟ್ಟೆಗೆ ತಂದು ಮಾರಾಟವಾಗದೆ ಉಳಿದರೆ ಅದನ್ನು ಮಾರುಕಟ್ಟೆ ಆವರಣದಲ್ಲಿ ಸುರಿಯಬಾರದು. ಬದಲಿಗೆ ಎಪಿಎಂಸಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಗುತ್ತಿಗೆದಾರರಿಗೆ ತಿಳಿಸಿ ಹೊರಗೆ ಸಾಗಿಸಬೇಕು’ ಎಂದು ಸಲಹೆ ನೀಡಿದರು.
‘ಎಪಿಎಂಸಿ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಮಾರಾಟವಾಗದ ಟೊಮೆಟೊ ಸರಕನ್ನು ಎಪಿಎಂಸಿ ಆವರಣದಲ್ಲಿ ಅಥವಾ ರಸ್ತೆಗಳ ಬದಿಯಲ್ಲಿ ಸುರಿದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.