ADVERTISEMENT

ಮುಳಬಾಗಿಲು | ಟೊಮೆಟೊ ದರ ಏರಿಕೆ: ರೈತರ ಹರ್ಷ

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:24 IST
Last Updated 5 ಮೇ 2022, 2:24 IST
ಮುಳಬಾಗಿಲು ತಾಲ್ಲೂಕಿನ ಎನ್. ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆಗೆ ಹರಾಜಿಗೆ ಬಂದಿರುವ ಟೊಮೆಟೊ
ಮುಳಬಾಗಿಲು ತಾಲ್ಲೂಕಿನ ಎನ್. ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆಗೆ ಹರಾಜಿಗೆ ಬಂದಿರುವ ಟೊಮೆಟೊ   

ಮುಳಬಾಗಿಲು: ಟೊಮೆಟೊ ಬೆಲೆ ಏರಿಕೆಯಾಗಿರುವ ಪರಿಣಾಮ ತಾಲ್ಲೂಕಿನ ಬೆಳೆಗಾರರು ಸಂತಸಗೊಂಡಿದ್ದಾರೆ.

ಕಸಬಾ ಹೋಬಳಿಯ ಎನ್. ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆ ಯಲ್ಲಿ ಬುಧವಾರ ಟೊಮೆಟೊ ಧಾರಣೆ ಏರಿಕೆ ಕಂಡಿತು.15 ಕೆ.ಜಿ ತೂಕದ ಟೊಮೆಟೊ ಬಾಕ್ಸ್‌ ಬೆಲೆಯು ₹ 750ಕ್ಕೆ ಏರಿಕೆಯಾಗಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಬೇಡಿಕೆ ಇಲ್ಲದ ಕಾರಣ ಟೊಮೆಟೊ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದರು. ಮತ್ತೊಂದೆಡೆ ಮಳೆಯಿಂದ ಬೆಳೆ ನಾಶವಾದ ಹಿನ್ನೆಲೆಯಲ್ಲಿ ತೊಂದರೆಗೆ ಸಿಲುಕಿದ್ದರು. ಕಳೆದ ಒಂದು ವಾರದಿಂದ ಬೆಲೆ ಏರಿಕೆಯಾಗುತ್ತಿದೆ.

ADVERTISEMENT

ಎನ್. ವಡ್ಡಹಳ್ಳಿ ಮಾರುಕಟ್ಟೆಗೆ ಈ ಹಿಂದೆ ಪ್ರತಿದಿನ ಒಂದು ಲಕ್ಷ ಕ್ರೇಟ್‌ಗಳು ಹರಾಜಿಗೆ ಬರುತ್ತಿದ್ದವು. ಈಗ ತಾಲ್ಲೂಕಿನಲ್ಲಿ 1,500 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಿದೆ. ಹಾಗಾಗಿ, ಮಾರುಕಟ್ಟೆಗೆ ಕೇವಲ 20 ಸಾವಿರ ಕ್ರೇಟ್‌ಗಳು ಬರುತ್ತಿವೆ. ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ.

‘ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಟೊಮೆಟೊ ಇಳುವರಿ ಕಡಿಮೆಯಾಗಿದೆ. ಅಲ್ಲಿನ ವ್ಯಾಪಾರಿಗಳು ಇಲ್ಲಿಗೆ ಖರೀದಿ ಮಾಡಲು ಬರುತ್ತಿರುವುದೇ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ’ ಎನ್ನುತ್ತಾರೆ ದೊಡ್ಡಬಂಡಹಳ್ಳಿಯ ಹೊಸಪ್ಪನವರ ನಾಗರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.