ADVERTISEMENT

ನಾಳೆ ಘಟಿಕೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 15:44 IST
Last Updated 21 ಮಾರ್ಚ್ 2019, 15:44 IST

ಕೋಲಾರ: ‘ಸಂಸ್ಥೆಯ 9ನೇ ಘಟಿಕೋತ್ಸವ ಸಮಾರಂಭ ಮಾರ್ಚ್‌ 23ರಂದು ನಡೆಯಲಿದೆ’ ಎಂದು ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಉಪ ಕುಲಪತಿ (ಪ್ರಭಾರ) ಡಾ.ಎ.ವಿ.ಎಂ.ಕುಟ್ಟಿ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇವರಾಜ ಅರಸು ವೈದ್ಯಕೀಯ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಸಮಾರಂಭ ಆರಂಭವಾಗಲಿದೆ’ ಎಂದು ಹೇಳಿದರು.

‘ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ಘಟಿಕೋತ್ಸವ ಭಾಷಣ ಮಾಡುತ್ತಾರೆ. ಸಮಾರಂಭದಲ್ಲಿ ಸಂಸ್ಥೆಯ 217 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಪಿ.ಎಚ್‌ಡಿ ಮತ್ತು ಫೆಲೋಶಿಪ್ ತಲಾ ಇಬ್ಬರು ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ಹಂತದ 55, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ನ 19 ಮಂದಿ ಹಾಗೂ ಎಂಬಿಬಿಎಸ್ ಕೋರ್ಸ್‌ನ 109 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಾದ ಡಾ.ಪಾಂಡೆ ಸ್ವಾತಿ, ಡಾ.ಡಿ.ಜಿ.ನಿಖಿಲಾ, ಡಾ.ಪೂನ್‌ ಗುಜಾಲಿ ಲಿಸ್ಟನ್, ಡಾ.ಡಿ.ಎಸ್.ಅಪೂರ್ವ, ಡಾ.ಆರ್.ಪ್ರದೀಪ್ ಕ್ರಿಷ್ಣ, ಡಾ.ಅಭಿನಯ ರವಿಚಂದ್ರನ್ ಅವರಿಗೆ ಚಿನ್ನದ ಪದಕ ನೀಡಿ ಪುರಸ್ಕರಿಸಲಾಗುತ್ತದೆ’ ಎಂದರು.

‘ಸಂಸ್ಥೆಯ ಕುಲಪತಿ ಡಾ.ಎಸ್.ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ರಾಜೇಶ್ ಎನ್.ಜಗದಾಳೆ ಅತಿಥಿಯಾಗಿ ಭಾಗವಹಿಸುತ್ತಾರೆ. ಓದು ಬರಹ, ಸಾಮಾನ್ಯ ಜ್ಞಾನ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಾರ್ಚ್‌ 22ರಂದು ನಡೆಯುವ ಕಾಲೇಜು ದಿನಾಚರಣೆಯಲ್ಲಿ ಗೌರವಿಸಲಾಗುವುದು’ ಎಂದು ಪ್ರಾಂಶುಪಾಲ ಡಾ.ಶ್ರೀರಾಮುಲು ಮಾಹಿತಿ ನೀಡಿದರು.

ಸಂಸ್ಥೆಯ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಸಿ.ಮುನಿನಾರಾಯಣ, ಕುಲಸಚಿವ ಡಾ.ಕೆ.ಎನ್.ವಿ.ಪ್ರಸಾದ್, ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಲಕ್ಷ್ಮಯ್ಯ, ಉಪ ಪ್ರಾಂಶುಪಾಲ ಕೆ.ಎನ್.ಶಶಿಧರ್, ಡೀನ್‌ಗಳಾದ ಡಾ.ಬೀನಾ, ಡಾ.ಸಿ.ಕೆ.ರಾಜನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.