ADVERTISEMENT

ಗೊಂದಲ ಗೂಡಾದ ತಾ.ಪಂ ಸಾಮಾನ್ಯ ಸಭೆ

ಕಾರ್ಯ ನಿರ್ವಹಣಾಧಿಕಾರಿ– ಅಧ್ಯಕ್ಷರ ವಿರುದ್ಧ ಸದಸ್ಯರ ಧರಣಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 15:34 IST
Last Updated 29 ನವೆಂಬರ್ 2019, 15:34 IST
ಕೋಲಾರದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬಾವಿಗಿಳಿದು ಕಾರ್ಯ ನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರ ವಿರುದ್ಧ ಧರಣಿ ಮಾಡಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬಾವಿಗಿಳಿದು ಕಾರ್ಯ ನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರ ವಿರುದ್ಧ ಧರಣಿ ಮಾಡಿದರು.   

ಕೋಲಾರ: ‘ಜನರಿಂದ ಆಯ್ಕೆಯಾಗಿರುವ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ತಾಲ್ಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲ್ಲೂಕು ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಘೋಷಣೆ ಕೂಗಿ ಧರಣಿ ನಡೆಸಿದ್ದರಿಂದ ಸಭೆ ಗೊಂದಲದ ಗೂಡಾಯಿತು.

ಸಭೆಯಲ್ಲಿ ಕೆಲ ಸದಸ್ಯರು ಕಾರ್ಯ ನಿರ್ವಹಣಾಧಿಕಾರಿ ಎನ್‌.ವಿ.ಬಾಬು ಅವರ ಆಡಳಿತ ವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸಭಾಂಗಣದ ವೇದಿಕೆ ಮುಂದಕ್ಕೆ ತೆರಳಿ, ಬಾಬು ಹಾಗೂ ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ವಿರುದ್ಧ ಘೋಷಣೆ ಕೂಗಿದರು.

‘ಕಾರ್ಯ ನಿರ್ವಹಣಾಧಿಕಾರಿಗೆ ನಮ್ಮ ಬಗ್ಗೆ ಗೌರವವಿಲ್ಲ. ಇ.ಒ ಅವರ ವರ್ತನೆ ಸರಿಯಲ್ಲ’ ಎಂದು ಸದಸ್ಯರಾದ ಗೋಪಾಲಗೌಡ, ಕೃಷ್ಣೇಗೌಡ ಮತ್ತು ರಮೇಶ್ ಸಭೆಯ ಆರಂಭದಲ್ಲೇ ಕಿಡಿಕಾರಿದರು. ಇದಕ್ಕೆ ಧ್ವನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಮುದುವಾಡಿ ಮಂಜುನಾಥ್ ಸದಸ್ಯರೊಂದಿಗೆ ಧರಣಿ ಕುಳಿತರು.

ADVERTISEMENT

‘ತಾ.ಪಂನಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಅಧಿಕಾರಿಗಳಲ್ಲಿ ನಿರ್ಲಕ್ಷ್ಯ ತಾಂಡವವಾಡುತ್ತಿದೆ. ನಮ್ಮ ಮಾತಿಗೆ ಬೆಲೆಯೇ ಇಲ್ಲ. ಸಿಬ್ಬಂದಿ ಮತ್ತು ಅಧಿಕಾರಿಗಳು ಸದಸ್ಯರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ. ಭ್ರಷ್ಟಾಚಾರ ಹೆಚ್ಚಿದ್ದು, ಇದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಇ.ಒ ತಮ್ಮ ಧೋರಣೆ ಬದಲಿಸಿಕೊಳ್ಳುವವರೆಗೂ ಅವರಿಗೆ ಕಾರ್ಯ ನಿರ್ವಹಿಸಲು ಬಿಡುವುದಿಲ್ಲ’ ಎಂದು ಮಂಜುನಾಥ್‌ ಗುಡುಗಿದರು.

ಹಿಡಿತವಿಲ್ಲ: ‘ತಾ.ಪಂ ಅಧ್ಯಕ್ಷರೂ ಹಿಂದಿನಂತೆ ನಡೆದುಕೊಳ್ಳುತ್ತಿಲ್ಲ. ಅವರಲ್ಲಿ ನಿರ್ಲಕ್ಷ್ಯ ಕಾಡುತ್ತಿದ್ದು, ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಅಧಿಕಾರಿಗಳು ಅಧ್ಯಕ್ಷರ ಮಾತು ಕೇಳುತ್ತಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬರುವುದೇ ಇಲ್ಲ’ ಎಂದು ಕಿಡಿಕಾರಿದರು.

ಕಾರ್ಯ ನಿರ್ವಹಣಾಧಿಕಾರಿ ಬಾಬು ಸಮಜಾಯಿಷಿ ನೀಡಲು ಮುಂದಾದಾಗ ಸದಸ್ಯರು ಅವಕಾಶ ನೀಡದೆ ಧಿಕ್ಕಾರ ಕೂಗಿ, ‘ನಿಮ್ಮ ವರ್ತನೆ ಸರಿಯಿಲ್ಲ. ತಿದ್ದಿಕೊಂಡರೆ ಸರಿ, ಇಲ್ಲವಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಸ್ಪಂದಿಸುತ್ತಿಲ್ಲ: ‘ಇ-ಸ್ವತ್ತು ಸಮಸ್ಯೆಗಳು ಸಾಕಷ್ಟು ಇವೆ. ಇ.ಒ ಗ್ರಾಮೀಣ ಭಾಗದ ಜನರ ಇ-ಸ್ವತ್ತು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನರಸಾಪುರ ಮತ್ತು ವೇಮಗಲ್ ಸುತ್ತಮುತ್ತ ಮಾತ್ರ ಗಮನ ಕೊಟ್ಟಿದ್ದಾರೆ. ಆ ಭಾಗದ ಇ-ಸ್ವತ್ತು ಸಮಸ್ಯೆ ಪ್ರಕರಣಗಳಲ್ಲಿ ವಸೂಲಿ ಮಾಡಿಕೊಂಡು ಸಮಸ್ಯೆ ಬಗೆಹರಿಸುತ್ತಿದ್ದಾರೆ. ಆದರೆ, ನಮ್ಮ ಕಡತಗಳು ಮೂಲೆ ಸೇರಿವೆ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಸುವರ್ಣ ಕರ್ನಾಟಕ ಯೋಜನೆಯಲ್ಲಿ ಸರ್ಕಾರದಿಂದ ಬಂದಿರುವ ಅನುದಾನ ಬಳಕೆಯಾಗದೆ ವಾಪಸ್‌ ಹೋಗಿದೆ. ಅಂಗವಿಕಲರ ಕಲ್ಯಾಣ ನಿಧಿ ಅನುದಾನವು ಹಿಂದಕ್ಕೆ ಹೋಗಿದೆ. ಇದಕ್ಕೆಲ್ಲಾ ಇ.ಒ ಅವರ ನಿರ್ಲಕ್ಷ್ಯವೇ ಕಾರಣ’ ಎಂದು ಮಂಜುನಾಥ್ ಆರೋಪಿಸಿದರು.

ನೋಟಿಸ್ ಜಾರಿ: ‘ಆಡಳಿತ ವ್ಯವಸ್ಥೆ ಕುಸಿದಿರುವುದು ನಿಜ. ಇದನ್ನು ಒಪ್ಪಿಕೊಳ್ಳುತ್ತೇನೆ. ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವಾಗಿದೆ. ನನ್ನಲ್ಲಿನ ಮೃದು ಧೋರಣೆಯೇ ಇದಕ್ಕೆಲ್ಲಾ ಕಾರಣ. ಇನ್ನು ಮುಂದೆ ಹೀಗೆ ಆಗಲು ಬಿಡುವುದಿಲ್ಲ’ ಎಂದು ಹೇಳಿದ ಅಧ್ಯಕ್ಷ ಆಂಜಿನಪ್ಪ ಧರಣಿನಿರತ ಸದಸ್ಯರ ಮನವೊಲಿಸಿದರು.

‘ಇಂದಿನ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುತ್ತೇವೆ. ಜತೆಗೆ ಆ ಅಧಿಕಾರಿಗಳ ವಿರುದ್ಧ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಖಜಾನೆ ಅಧಿಕಾರಿಗಳಿಗೆ ದೂರು ಕೊಡುತ್ತೇವೆ. ಅಂಗವಿಕಲರ ಕಲ್ಯಾಣ ನಿಧಿ ಅನುದಾನದ ಸದ್ಬಳಕೆಗೆ ಕ್ರಮ ಕೈಗೊಳ್ಳುತ್ತೇವೆ. ಸದಸ್ಯರು ನೀಡಿರುವ ಅರ್ಜಿಗಳನ್ನು ಪರಿಗಣಿಸಿ ಸಮಸ್ಯೆ ಪರಿಹರಿಸುತ್ತೇವೆ’ ಎಂದು ಭರವಸೆ ನೀಡಿದ್ದರಿಂದ ಸದಸ್ಯರು ಸಮಾಧಾನಗೊಂಡರು.ನಂತರ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ತಾ.ಪಂ ಉಪಾಧ್ಯಕ್ಷೆ ಲಕ್ಷ್ಮೀ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.